ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿದ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಸದ್ಗುರು ಬ್ರಹ್ಮಾನಂದ ಶ್ರೀ

ಕನ್ಯಾಡಿ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಕುಟುಂಬಸ್ಥರ ಆಕ್ರಂದನದ ನಡುವೆಯೇ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ನಿನ್ನೆ ಸಂಜೆ ಸ್ವಗ್ರಾಮದಲ್ಲಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.

 

ಇವರ ಕೊಲೆಯನ್ನು ಖಂಡಿಸಿ, ಹಲವರಿಂದ ಆಕ್ರೋಶ ವ್ಯಕ್ತವಾಗಿದೆ. ಇದೀಗ ಪ್ರವೀಣ್ ನೆಟ್ಟಾರ್ ಇವರ ಬರ್ಬರ ಕೊಲೆಯನ್ನು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಧೀಶರಾದ ಸದ್ಗುರು ಬ್ರಹ್ಮಾನಂದ ಶ್ರೀ ಗಳು ಖಂಡಿಸಿದ್ದಾರೆ.

“ಯಾವುದೇ ಪಕ್ಷದ ಸರ್ಕಾರಗಳು ನುಡಿದಂತೆ ನಡೆಯದಿದ್ದಾಗ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತದೆ. ಇವತ್ತು ಸರಕಾರಗಳು ಅಥವಾ ಸಂಘ ಸಂಸ್ಥೆಗಳು ಅವರಿಗೆ ಪರಿಹಾರವನ್ನೇನೋ ಘೋಷಿಸಬಹುದು. ಆದರೆ ಅವನ ಕುಟುಂಬಕ್ಕೆ ಆದ ನಷ್ಟ ಅಂದ್ರೆ ಅವನ ಹೆಂಡತಿ ಮಕ್ಕಳು ತಂದೆ ತಾಯಿ ಈ ಘಟನೆಯ ದುಃಖವನ್ನು ಜೀವನಪರ್ಯಂತ ಮರೆಯಲಾಗುವುದಿಲ್ಲ .ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನಬದ್ಧವಾದ ರಾಜ್ಯಾಂಗಗಳು ಸಮರ್ಥವಾಗಿ ಕಠೋರವಾಗಿ ನಿರ್ಣಯಗಳನ್ನು ತೆಗೆದುಕೊಂಡಾಗ ಇಂತಹ ದುಷ್ಕೃತ್ಯಗಳು ನಡೆಯುವುದಿಲ್ಲ”.

“ವಿಕೃತ ಮನಸ್ಸಿನ ಯುವಕರಿಗೆ ಯಾವುದು ಸರಿ ಯಾವುದು ತಪ್ಪು ಎಂದು ಗೊತ್ತಾಗುವುದಿಲ್ಲ. ಇದಕ್ಕೆ ಸರಕಾರಗಳು ಅದು ಯಾವುದೇ ಪಕ್ಷದ ಸರ್ಕಾರ ಇರಲಿ ಯಾವುದೇ ಸಂದರ್ಭವಿರಲಿ, ಯಾವುದೇ ಮತ ಪಂಥದ ವ್ಯಕ್ತಿಗಳು ತಪ್ಪು ಮಾಡಿದಾಗ ನಿಷ್ಕಾರುಣ್ಯವಾಗಿ ಕಠಿನವಾದ ಶಿಕ್ಷೆಯನ್ನು ವಿಧಿಸಿದಾಗ ಇಂತಹ ದುಷ್ಕೃತ್ಯಗಳು ನಡೆಯೋದಿಲ್ಲ”.

ಈ ಪೈಶಾಚಿಕ ಘಟನೆ ನಮಗೆ ತುಂಬಾ ನೋವು ಕೊಟ್ಟಿದೆ ಇಂಥ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯದಿರಲೆಂದು ನನ್ನ ಸ್ವಾಮಿ ಶ್ರೀರಾಮಚಂದ್ರ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಧೀಶರಾದ ಸದ್ಗುರು ಬ್ರಹ್ಮಾನಂದ ಶ್ರೀ ಗಳು ನೋವಿನಿಂದ ಹೇಳಿದ್ದಾರೆ.

Leave A Reply

Your email address will not be published.