ಒಂದನೇ ತರಗತಿ ದಾಖಲಾತಿಗೆ ಮಕ್ಕಳ ವಯೋಮಿತಿ ಹೆಚ್ಚಿಸಿ ಸರಕಾರದಿಂದ ಮಹತ್ವದ ಆದೇಶ
ಪೋಷಕರೇ ನಿಮಗೊಂದು ಮುಖ್ಯವಾದ ಮಾಹಿತಿ. ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಇನ್ನು ಮುಂದೆ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಕಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು.
ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದ್ದು, ಪ್ರಸಕ್ತ ವರ್ಷದಲ್ಲಿ ದಾಖಲಾತಿ ಆರಂಭವಾಗಿರುವುದರಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ಆದೇಶ ಜಾರಿಗೆ ಬರಲಿದೆ. ಈ ಹಿಂದೆ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳ ವಯೋಮಿತಿ ನಿಗದಿಪಡಿಸಿದ್ದು, ಈಗ ಎಲ್ಲಾ ಆದೇಶಗಳನ್ನು ಹಿಂಪಡೆಯಲಾಗಿದೆ.
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ಮತ್ತು 2012 ರ ಕಡ್ಡಾಯ ಶಿಕ್ಷಣ ನಿಯಮಗಳ ಅನ್ವಯ ಶಿಕ್ಷಣ ಇಲಾಖೆ ಆಯುಕ್ತರು ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ. 6 ವರ್ಷವಾಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡಲಾಗುವುದು ಎಂದು ಹೇಳಲಾಗಿದೆ.
ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಆಯಾ ಶೈಕ್ಷಣಿಕ ವರ್ಷದ ಜೂನ್ ಒಂದಕ್ಕೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ವಯೋಮಿತಿ ನಿಗದಿಪಡಿಸಲಾಗಿದೆ.