ಪ್ರವೀಣ್ ನೆಟ್ಟಾರು ಹತ್ಯೆ ಯಾಕಾಯಿತು ? | ಬೆಳ್ಳಾರೆ ಠಾಣೆಯ ವ್ಯಾಪ್ತಿಯಲ್ಲಿ ಕೆಲತಿಂಗಳಲ್ಲಿ ನಡೆಯಿತು ನಾಲ್ಕು ಕೊಲೆ
ಬೆಳ್ಳಾರೆ ಮೊದಲಿನ ಹಾಗೇ ಇಲ್ಲ. ಕ್ರೈಂ ನಡೆಯುತ್ತಿಲ್ಲ ಎಂದಲ್ಲ. ಅಲ್ಲೊಂದು ಇಲ್ಲೊಂದು ಕಳ್ಳತನ, ಹೊಡೆದಾಟದ ಕೇಸು ಬಿಟ್ಟರೆ ಕೋಮು ವಿವಾದ, ಕೊಲೆಯಂತಹ ಘಟನೆಗಳು ಅಷ್ಟೇನೂ ಇರಲಿಲ್ಲ.
ರುಕ್ಮ ನಾಯ್ಕ್ ಅವರು ಚಾರ್ಜ್ ತೆಗೆದುಕೊಂಡ ದಿನವೇ ಪಾಲ್ತಾಡಿ ಗ್ರಾಮದ ಬೊಳಿಯಾಲದಲ್ಲಿ ಹತ್ಯೆಯಾದ ಪ್ರಜರಣವನ್ನು ಬಯಲಿಗೆಳೆದಿದ್ದರು.ಅದಾದ ಬಳಿಕ ಕಾರ್ತಿಕ್ ಮೇರ್ಲ ಕೊಲೆಯ ಪ್ರತೀಕಾರವಾಗಿ ಪೆರ್ಲಂಪಾಡಿಯಲ್ಲಿ ನಡೆದ ಚರಣ್ ರಾಜ್ ಕೊಲೆ ಪ್ರಕರಣವಾದ ಬಳಿಕ ಮೂವರು ಆರೋಪಿಗಳಾದ ನರ್ಮೇಶ್ ರೈ(29), ನಿತಿಲ್ ಶೆಟ್ಟಿ(23), ವಿಜೇಶ್(22) ಅವರ ಬಂಧನವನ್ನು ಪೊಲೀಸರು ಮಾಡಿದ್ದಾರೆ.
ಜುಲೈ 10ರಂದು ತೀರಾ ಇತ್ತೀಚೆಗೆ ಮಂಜೇಶ್ವರ – ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದ ಪ್ರಕರಣದ ಸಂದರ್ಭದಲ್ಲಿ ಕೂಡಾ ನಾಪತ್ತೆ ಶೋಧ ಕಾರ್ಯ ಸುಮಾರು ಎರಡು ಮೂರು ದಿನಗಳ ಕಾಲ ನಡೆಯಿತು. ಮೂರು ದಿನಗಳ ಬಳಿಕವೇ ಇಬ್ಬರ ಶವ ಪತ್ತೆಯಾಗಿತ್ತು. ಇದು ಕೂಡ ಬೆಳ್ಳಾರೆ ಪೊಲೀಸರ ನಿದ್ದೆ ಹಾರಿಸಿದ ಘಟನೆಯಾಗಿತ್ತು.
ಎಲ್ಲಾ ಮುಗಿಯಿತು ಅನ್ನುವಷ್ಟರಲ್ಲಿ ಕೇರಳ ಮಸೂದ್
ಬೆಳ್ಳಾರೆಯ ಕಳಂಜದಲ್ಲಿ ಎಂಟು ಜನರು ಸೇರಿ ಭೀಕರವಾಗಿ ಹಲ್ಲೆಗೊಂಡು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಹಲ್ಲೆ ನಡೆಸಿದ್ದ ಎಂಟು ಜನರ ಪತ್ತೆಯಾಯಿತು.
ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿ ಅವರು ಜೈಲು ತಲುಪುವಾಗಲೇ ಬೆಳ್ಳಾರೆಯಲ್ಲಿ ಮತ್ತೊಂದು ರಕ್ತದೋಕುಳಿ ಹರಿದಿದೆ.
ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಚಿಕನ್ ಸೆಂಟರ್ ಮಾಲಕ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಎಂಬವರ ಮೇಲೆ ದುಷ್ಕರ್ಮಿಗಳಿಬ್ಬರು ಕತ್ತಿಯಿಂದ ಕಡಿದಿದ್ದಾರೆ. ತೀವ್ರ ಗಾಯಗೊಂಡಿರುವ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಜು.26ರಂದು ರಾತ್ರಿ 8.20 ರಿಂದ 8.45ರ ನಡುವೆ ಈ ಘಟನೆ ನಡೆದಿದೆ. ಪ್ರವೀಣ್ರವರು ತನ್ನ ಅಂಗಡಿಯಲ್ಲಿ ಕುಳಿತುಕೊಂಡಿದ್ದ ವೇಳೆ ಕೆಎಲ್ (KL) ನಂಬರಿನ ಬೈಕ್ನಲ್ಲಿ ಬಂದಿದ್ದ ಈರ್ವರು ದುಷ್ಕರ್ಮಿಗಳು ಬಂದಿದ್ದಾರೆ. ಇದನ್ನು ಗಮನಿಸಿದ ಪ್ರವೀಣ್ ತಪ್ಪಿಸಿಕೊಳ್ಳಲೆಂದು ಪಕ್ಕದ ಅಂಗಡಿಗೆ ಹೋಗುತ್ತಿದ್ದ ವೇಳೆಯೇ ಹಿಂದಿನಿಂದ ಬಂದು ಅವರ ತಲೆಗೆ ತಲವಾರಿನಿಂದ ಭೀಕರವಾಗಿ ಕಡಿದಿದ್ದಾರೆ. ಹಾಗೂ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವೀಣ್ ಅವರ ಜೀವ ಉಳಿಸಲು ಕೂಡಲೇ ಅಲ್ಲಿಂದ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆಂದು ಕರೆ ತರುತ್ತಿದ್ದ ವೇಳೆ ದಾರಿ ಮಧ್ಯೆನೇ ಅವರ ಉಸಿರು ನಿಂತಿದೆ.
ಈ ಘಟನೆ ಯಾಕಾಗಿ ನಡೆಯಿತು ಎಂಬುದು ನಿಗೂಢವಾಗಿದೆಯಾದರೂ ಕೆಲ ದಿನಗಳ ಹಿಂದೆ ಕಳೆಂಜ ವಿಷ್ಣುನಗರದಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ಸುದ್ದಿ ಜೋರಾಗಿ ಹರಡಿದೆ.ಈ ಘಟನೆ ಬೆಳ್ಳಾರೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟು ಮಾಡಿದೆ. ಜನ ಬಸ್ಸಿಗೆಲ್ಲ ಕಲ್ಲು ಎಸೆಯುವ ಮೂಲಕ ತಮ್ಮ ಆಕ್ರೋಶ ತೋರಿಸುತ್ತಿದ್ದಾರೆ.
ಬೆಳ್ಳಾರೆಯಿಂದ ಕೇರಳಕ್ಕೆ ನೇರ ರಸ್ತೆಯಿದೆ. ಕೇರಳದಿಂದಲೇ ಬಂದವರೇ, ಈ ಕೊಲೆ ಮಾಡಿ ಕೊಂದು ಪರಾರಿಯಾದರಾ? ಆದರೆ ಇಲ್ಲಿ ಮೂಡುವ ಪ್ರಶ್ನೆ ಏನೆಂದರೆ, ಕೇರಳದ ನಿವಾಸಿಗಳಿಗೆ ಬಿಜೆಪಿಯ ಮುಖಂಡ ಪ್ರವೀಣ್ ಪರಿಚಯ ಹೇಗೆ ಸಾಧ್ಯ ? ಆತ ಒಬ್ಬನೇ ಇದ್ದಾನೆ ಎಂಬ ಮಾಹಿತಿ ಕೊಟ್ಟವರ್ಯಾರು? ಅಂಗಡಿಯನ್ನು 8.30 ಕ್ಕೇ ಮುಚ್ಚಿ ತೆರಳುತ್ತಾನೆ ಎಂದು ಹಂತಕರಿಗೆ ಹೇಳಿದ ಆ ವ್ಯಕ್ತಿ ಯಾರು? ಈ ಕೊಲೆಗೆ ಪ್ರೇರಣೆ ಯಾರು? ಇದೆಲ್ಲಾ ಪೊಲೀಸ್ ತನಿಖೆಯಿಂದ ಆಗುವ ಗುಟ್ಟಾದ ಕೆಲಸ. ಈ ಎಲ್ಲಾ ಪ್ರಶ್ನೆಗಳಿಗೆ ಆದಷ್ಟು ಬೇಗ ಉತ್ತರ ದೊರಕಲಿದೆ ಎನ್ನುವ ನಿರೀಕ್ಷೆ ಜನರಿಗಿದೆ.