ಚೊಚ್ಚಲ ಹೆರಿಗೆಯ ಬಾಣಂತಿ ಮಗುವಿಗೆ ಎದೆಹಾಲು ಕುಡಿಸುತ್ತಿರುವಾಗಲೇ ಹೃದಯಾಘಾತಗೊಂಡು ಸಾವು!!!
ಹೆತ್ತ ತಾಯಿಯೋರ್ವಳು ಮಗುವಿಗೆ ಎದೆಹಾಲು ಕುಡಿಸುತ್ತಿರುವ ಸಂದರ್ಭದಲ್ಲಿ ಹೃದಯಾಘಾತಗೊಂಡು ಮೃತಪಟ್ಟಿರುವ ದಾರುಣ ಘಟನೆಯೊಂದು ನಡೆದಿದೆ.
ಈ ಘಟನೆ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ತಿಮ್ಮರಾಜ ಮಂಡಲ್ ನ ನೆರೆಲ್ಲಪಲ್ಲಿಯಲ್ಲಿ ನಡೆದಿದೆ.
ರಾಜಾಪುರ ಮಂಡಲದ ಜಯಶ್ರೀ ( 25 ವರ್ಷ) ಎಂಬಾಕೆಯೇ ಮೃತಹೊಂದಿದ ಮಹಿಳೆ.
ಚೊಚ್ಚಲ ಹೆರಿಗೆಯಾಗಿ ಎರಡು ತಿಂಗಳಾಗಿ ಸ್ವಲ್ಪ ಅನಾರೋಗ್ಯ ಕಾಣಿಸಿಕೊಂಡ ಕಾರಣ, ಜಯಶ್ರೀ ಗಂಡ ಪ್ರಶಾಂತ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದೇನು ದೊಡ್ಡ ಸಮಸ್ಯೆಯಲ್ಲ, ಹೃದಯನಾಳದಲ್ಲಿ ಸ್ವಲ್ಪ ಸಮಸ್ಯೆ ಇದೆ. ಬೇಗ ಗುಣವಾಗುತ್ತದೆ ಎಂದು ಹೇಳಿದ್ದ ವೈದ್ಯರು ಔಷಧ ಕೊಟ್ಟು ಕಳಿಸಿದ್ದರು.
ಹಾಗಾಗಿ ವೈದ್ಯರ ಸಲಹೆ ಮೇರೆಗೆ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಬೆಳಗಿನ ಜಾವ ಎಂದಿನಂತೆ ಮಗುವಿಗೆ ಎದೆಹಾಲು ಕುಡಿಸುತ್ತಿರುವ ಸಂದರ್ಭದಲ್ಲಿ ದಿಢೀರ್ ಹೃದಯಾಘಾತವಾಗಿದೆ. ಹಾಗೂ ಕೂಡಲೇ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಜ್ಜಿ ಚಹಾ ಕುಡಿಯಲೆಂದು ಕರೆದಾಗ, ಯಾವ ಪ್ರತಿಕ್ರಿಯೆ ಬಾರದೇ ಇದ್ದುದ್ದನ್ನು ನೋಡಿದಾಗ ವಿಷಯ ಗಮನಕ್ಕೆ ಬಂದಿದೆ. ಇಲ್ಲಿ ಏನಾಗಿದೆ ಎಂದು ಏನೂ ಅರಿಯದ ಎರಡು ತಿಂಗಳ ಹಸುಗೂಸು ಮಾತ್ರ ತಾಯಿ ತೊಡೆಯಲ್ಲಿ ಪಿಳಿ ಪಿಳಿ ಕಣ್ಣು ಬಿಡುತ್ತಾ ಹಾಲು ಹೀರುತ್ತಿದ್ದ ದೃಶ್ಯ ಮಾತ್ರ ಎಲ್ಲರ ಎದೆ ಹಿಂಡುವಂತೆ ಮಾಡಿದ್ದಂತೂ ಸುಳ್ಳಲ್ಲ.