ಸಾಲದಿಂದಾಗಿ ಮನೆ ಮಾರಾಟಕ್ಕೆ ಮುಂದಾಗಿದ್ದ ಕುಟುಂಬ | ಮನೆ ಮಾರಾಟದ ಎರಡು ಗಂಟೆ ಮೊದಲು ನಡೆಯಿತೊಂದು ಪವಾಡ | ಏನದು?
ಈ ದುಬಾರಿ ದುನಿಯಾದಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರೂ ಬಟ್ಟೆಗಿದ್ದರೆ ಊಟಕ್ಕಿಲ್ಲ, ಊಟಕ್ಕಿದ್ದರೆ ಬಟ್ಟೆಗಿಲ್ಲ ಎನ್ನುವ ಹಾಗೇ ಪರಿಸ್ಥಿತಿ. ಇನ್ನು ಈ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದವರ ಪಾಡಂತೂ ಆ ದೇವರಿಗೇ ಪ್ರೀತಿ.
ಇಂಥದ್ದೇ ಒಂದು ಕುಟುಂಬ ಕೇರಳದಲ್ಲಿ ಕಷ್ಟದಲ್ಲಿ ಇತ್ತು. ಸಾಲದ ಶೂಲದಲ್ಲಿ ಇದ್ದ ಈ ಕುಟುಂಬ ದೃಢ ನಿರ್ಧಾರವೊಂದನ್ನು ಮಾಡಿತ್ತು. ತಾವು ವಾಸಿಸುತ್ತಿದ್ದ, ಸ್ವಂತ ಮನೆಯನ್ನೇ ಮಾರಾಟ ಮಾಡಲು ನಿರ್ಧಾರ ಮಾಡಿತ್ತು. ಆದರೆ ಇಲ್ಲಿ ಅದೃಷ್ಟ ಅವರ ಬೆನ್ನ ಹಿಂದೆನೇ ಇದ್ದದ್ದು ಅವರಿಗೆ ಗೊತ್ತಿರಲಿಲ್ಲ. ಇನ್ನೇನು ಮನೆ ಮಾರಾಟ ಆಗಬೇಕು ಅನ್ನುವಷ್ಟರಲ್ಲಿ ಅದೃಷ್ಟ ಅವರ ಕಾಲ ಕೆಳಗೆ ಬಂದು ಬಿದ್ದಿತ್ತು. ಹೌದು, ಈ ವ್ಯಕ್ತಿಗೆ ಲಾಟರಿ ಟಿಕೆಟ್ ಹೊಡೆದು ಬರೋಬ್ಬರಿ 1 ಕೋಟಿ ಬಂಪರ್ ಬಹುಮಾನ ಲಭಿಸಿದೆ.
ಇದು ಕೇಳುವುದಕ್ಕೆ ಅಚ್ಚರಿಯಾದರೂ ಕೇರಳದಲ್ಲಿ ನಡೆದ ನಿಜ ಘಟನೆ ಇದು. ಕೆಲವೊಮ್ಮೆ ದೇವರು ನಾವು ಬಯಸ್ಸಿದ್ದಂಕಿತಲೂ ಸ್ವಲ್ಪ ಉತ್ತಮವಾದುದನ್ನೇ ಕೊಡುತ್ತಾನೆ ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು. ಈ ಕುಟುಂಬದ ಪಾಲಿಗೆ ಈ ಮಾತು ಸತ್ಯವಾಗಿದೆ.
ಕಾಸರಗೋಡಿನ ಪೇಂಟರ್ ಸಾಲದ ಸುಳಿಯಲ್ಲಿ ಸಿಲುಕಿದ್ದ. ಮಂಜೇಶ್ವರದಲ್ಲಿ ತಾನು ಹೊಸದಾಗಿ ನಿರ್ಮಿಸಿದ ಮನೆ ಮಾರಾಟ ಮಾಡಲು ಟೋಕನ್ ಹಣ ಪಡೆಯುವ ಎರಡು ಗಂಟೆಗಳ ಮೊದಲು 1 ಕೋಟಿ ರೂಪಾಯಿ ಲಾಟರಿ ಬಹುಮಾನ ಲಭಿಸಿದೆ. ಮಂಜೇಶ್ವರದ ಪಾವೂರು ನಿವಾಸಿ ಮೊಹಮ್ಮದ್ ಬಾವ (50) ಅವರೇ ಅದೃಷ್ಟವಂತರು. ಭಾರೀ ಸಾಲದ ಸುಳಿಯಲ್ಲಿ ತತ್ತರಿಸಿರುವ ಬಾವ ಮತ್ತು ಅವರ ಪತ್ನಿ ಅಮಿನಾ (45) ಎಂಟು ತಿಂಗಳ ಹಿಂದೆ ನಿರ್ಮಿಸಿದ 2,000 ಚದರ ಅಡಿಯ ತಮ್ಮ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು.
ದಂಪತಿಗೆ ಐದು ಮಕ್ಕಳು, ನಾಲ್ವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಇಬ್ಬರು ಹಿರಿಯ ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಮಗ ನಿಜಾಮುದ್ದೀನ್ (22) ಮೂರು ವಾರಗಳ ಹಿಂದೆ ಕತಾರ್‌ನ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರು ಕೊನೆಯ ಹೆಣ್ಣುಮಕ್ಕಳು 12ನೇ ತರಗತಿಯಲ್ಲಿ ಓದುತ್ತಿದ್ದಾರೆ. ತಿಂಗಳ ಸಂಬಳ ತೀರಾ ಕಡಿಮೆ ಇರುವುದರಿಂದ ಸಾಲ ತೀರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಬಾವ ಹೇಳಿದ್ದಾರೆ.
ಭಾನುವಾರ ಸಂಜೆ 5 ಗಂಟೆಗೆ, ಮನೆಯನ್ನು ಕೊಳ್ಳಲು ಒಪ್ಪಂದವನ್ನು ಮಾಡಿ ಟೋಕನ್ ಮೊತ್ತದೊಂದಿಗೆ ಮನೆಗೆ ಬರಲು ಪಾರ್ಟಿ ಒಪ್ಪಿಕೊಂಡಿತ್ತು. ನಮಗೆ 45 ಲಕ್ಷ ರೂಪಾಯಿ ಸಾಲ ಇರುವುದರಿಂದ ಮನೆಗೆ 45 ಲಕ್ಷ ರೂಪಾಯಿ ಬೇಕಿತ್ತು. ಆದರೆ ಬ್ರೋಕರ್ ಮತ್ತು ಪಾರ್ಟಿ 40 ಲಕ್ಷ ರೂ ಎಂದಿದ್ದರು. ಆದರೆ ದಂಪತಿಗಳು ಯಾವುದೇ ಬೆಲೆಗೆ ಮನೆಯನ್ನು ಮಾರಾಟ ಮಾಡಲು ನಿರ್ಧಾರ ಮಾಡಿದ್ದರು. ಅಮೀನಾ ಅವರು 10 ಲಕ್ಷ ರೂಪಾಯಿ ಬ್ಯಾಂಕ್ ಸಾಲ ಪಡೆದಿದ್ದರು. ದಂಪತಿಗಳು ಮನೆ ಕಟ್ಟಲು ಸಂಬಂಧಿಕರಿಂದ ಇನ್ನೂ 20 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಅದರ ನಂತರ, ನಾವು ನಮ್ಮ ಎರಡನೇ ಮಗಳ ಮದುವೆಯನ್ನು ಮಾಡಬೇಕಾಗಿತ್ತು. ಹಾಗಾಗಿ ಸಾಲದ ಹೊರೆ ಹೆಚ್ಚಾಗಿತ್ತು.
ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆ ಖರೀದಿದಾರರಿಗಾಗಿ ಕಾಯುವ ಸಂದರ್ಭದಲ್ಲಿ ಬಾವ ಅಲ್ಲಿಂದ ಪೇಟೆಗೆಂದು ಹೋಗಿದ್ದಾರೆ. ಕೇರಳ ಸರ್ಕಾರ ನಡೆಸುವ ಫಿಫ್ಟಿ ಫಿಫ್ಟಿ ಲಾಟರಿಯ ನಾಲ್ಕು
ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಇವರು ನನಗೆ ಅದೃಷ್ಟನೇ ಇಲ್ಲ ಎಂದು ಹಪಹಪಿಸುತ್ತಿದ್ದರು.
ಆದರೆ ಅವರು ಖರೀದಿಸಿ ಲಾಟರಿ ಮಧ್ಯಾಹ್ನ 3 ಗಂಟೆಗೆ ಡ್ರಾ ಆಗಿದ್ದು, ಬಾವನಿಗೆ ಜಾಕ್ ಪಾಟ್ ಹೊಡೆದಿರುವುದು ಗೊತ್ತಾಗಿದೆ. ತೆರಿಗೆಯ ನಂತರ ಸುಮಾರು 63 ಲಕ್ಷ ರೂ ಕುಟುಂಬದ ಕೈ ಸೇರಲಿದೆ. ಇನ್ನೇನು ಸಂಜೆ 5 ಗಂಟೆಗೆ ರಿಯಲ್ ಎಸ್ಟೇಟ್ ದಲ್ಲಾಳಿಯೊಬ್ಬರು ಮನೆ ಖರೀದಿದಾರರೊಂದಿಗೆ ಮನೆಗೆ ಬರುತ್ತಾರೆಂದು ಹೇಳಿದ್ದಾರೆ. ಆದರೆ ಬಾವಾ ಅವರು ಈಗ ಮನೆ ಮಾರಾಟಕ್ಕಿಲ್ಲ ಎಂಬ ಬೋರ್ಡನ್ನು ಈಗಾಗಲೇ ಹಾಕಿದ್ದಾರಂತೆ.