ವಾರದ ಬಳಿಕ ಮಾಲೀಕರ ಕೈ ಸೇರಿತು ಮುದ್ದಿನ “ಗಿಣಿ” | ಮಿಸ್ಸಿಂಗ್ ಗಿಳಿ ಸಿಕ್ಕ ಕಥೆಯೇ ರೋಚಕ!
ವಾರದ ಹಿಂದೆ ಒಂದು ಗಿಳಿ ಕಳೆದು ಹೋಗಿದೆ ಎಂಬ ವರದಿ ಭಾರೀ ವೈರಲ್ ಆಗಿತ್ತು. ಗಿಳಿ ಕಳೆದು ಹೋಗುವುದರ ಜೊತೆಗೆ ಅದನ್ನು ಹುಡುಕಿ ಕೊಟ್ಟವರಿಗೆ ಇನಾಮ ಕೂಡಾ ಫಿಕ್ಸ್ ಮಾಡಲಾಗಿತ್ತು. ಎಷ್ಟು ಗೊತ್ತೇ ಬರೋಬ್ಬರಿ ರೂ.50,000. ಹಾಗೆನೇ ವಾರದ ಬಳಿಕ ಈಗ ಗಿಳಿ ಪತ್ತೆಯಾಗಿದೆ. ಹೌದು ಗಿಳಿ ಸಿಕ್ಕ ಖುಷಿ ಕುಟುಂಬದವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಹಾಗಾಗಿ ಗಿಳಿ ಸಿಕ್ಕ ಖುಷಿಯಲ್ಲಿ ಮನೆ ಮಂದಿ 50 ಸಾವಿರ ಬದಲಿಗೆ 85 ಸಾವಿರ ಬಹುಮಾನ ಕೊಟ್ಟು ಅರ್ಜುನ್ ದಂಪತಿ ಬಹಳ ಖುಷಿ ಪಟ್ಟಿದ್ದಾರೆ. ತಮ್ಮ ಕುಟುಂಬದ ಸದಸ್ಯನಂತಿದ್ದ ಗಿಳಿ ಮತ್ತೆ ಮನೆಗೆ ಬಂದಿದ್ದಕ್ಕೆ ಮನೆಯಲ್ಲಿ ಸಂತಸ ಮನೆ ಮಾಡಿದೆ.
ಶಿವಮೊಗ್ಗದ ಭದ್ರಾವತಿಯ ನಿವಾಸಿಗಳಾದ ಅರ್ಜುನ್ ಹಾಗೂ ರಂಜನಾ ದಂಪತಿ ಸುಮಾರು ಮೂರು ವರ್ಷಗಳಿಂದ ಎರಡು ಗಿಳಿಗಳನ್ನು ಸಾಕುತಿದ್ದರು. 20 ದಿನಗಳ ಹಿಂದಷ್ಟೇ ತುಮಕೂರಿನ ಜಯನಗರಕ್ಕೆ ಬಂದಿದ್ದರು. ಆದರೆ ಜುಲೈ 16 ರಂದು ಗಂಡು ಗಿಣಿ ಕಾಣದಾಗಿದೆ. ಹೀಗಾಗಿ ಆಟೋದಲ್ಲಿ ಅನೌನ್ಸ್ ಮಾಡುತ್ತಾ ಕರಪತ್ರ ಹಂಚುತ್ತಾ ಗಿಳಿಗಾಗಿ ಹುಡುಕಾಡುತ್ತಿದ್ದರು. ಆಫ್ರಿಕನ್ ಗ್ರೇ ಬಣ್ಣದ ಗಂಡು ಗಿಳಿಗೆ ರುಸ್ತುಮಾ ಅಂತಾ ಹೆಸರಿಟ್ಟಿದ್ರು. ಹುಡುಕಿ ಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ಕೊಡೋದಾಗಿ ಕೂಡಾ ಹೇಳಿದ್ದರು.
ಈಗ ಸಿದ್ಧಗಂಗಾ ಮಠದ ಬಂಡೆ ಪಾಳ್ಯದಲ್ಲಿ ಗಿಳಿ ಪತ್ತೆಯಾಗಿದ್ದು ಮನೆ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಶ್ರೀನಿವಾಸ್ ಎಂಬುವವರ ಮನೆಯ ಟೇರಸ್ ಮೇಲೆ ಗಿಳಿ ಇತ್ತು . ಗಮನಿಸಿದ ಮನೆ ಮಂದಿ ನಂತರ ಅರ್ಜುನ್ ದಂಪತಿಗಳಿಗೆ ತಿಳಿಸಿದ್ದಾರೆ. ಗಿಳಿ ಸಿಕ್ಕ ಸಂಭ್ರಮದಲ್ಲಿ ಓಡೋಡಿ ಬಂದ ಮನೆಮಂದಿ ಖುಷಿಯಲ್ಲಿ 50 ಸಾವಿರ ಬದಲಿಗೆ 85 ಸಾವಿರ ಬಹುಮಾನ ಕೊಟ್ಟಿದ್ದಾರೆ ಹಾಗೂ ಅರ್ಜುನ್ ದಂಪತಿ ಭಾರೀ ಖುಷಿ ಪಟ್ಟಿದ್ದಾರೆ. ಅಷ್ಟು ಮಾತ್ರವಲ್ಲದೇ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಕೂಡಾ.