ಅಕ್ರಮ ಗೋಸಾಗಾಟದ ಆರೋಪಿಗಳ ಆಸ್ತಿ ಮುಟ್ಟುಗೋಲು | ಪೊಲೀಸರಿಗೆ ಶಾಸಕ ಸಂಜೀವ ಮಠಂದೂರು ಸೂಚನೆ
ಪುತ್ತೂರು: ದೇಶದಲ್ಲಿ ಗೋ ಹತ್ಯೆ ಮಸೂದೆ ಇದ್ದರೂ ಅಕ್ರಮವಾಗಿ ಗೋ ಸಾಗಾಟ ಮಾಡಿ ವಧೆ ಮಾಡುತ್ತಿರುವುದು ಪುತ್ತೂರು ವಿಧಾನಸಭಾ ಕ್ಷೇತ್ರದ ಕೇಪು ಗ್ರಾಮದ ಕೋಡಂದೂರುವಿನಲ್ಲಿ ಪತ್ತೆಯಾಗಿದೆ. ಆಕ್ಟೋ ಕಾರಿನಲ್ಲಿ ಹಿಂಸಾತ್ಮಕವಾಗಿ ಅಕ್ರಮ ಗೋಸಾಗಾಟ ಮಾಡಿದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿ ಅವರನ್ನು ಶಾಶ್ವತವಾಗಿ ಜೈಲಿನಲ್ಲಿ ಇರುವಂತೆ ಕೇಸು ಹಾಕಬೇಕೆಂದು ಶಾಸಕ ಸಂಜೀವ ಮಠಂದೂರು ಅವರು ಪೊಲೀಸ್ ಮತ್ತು ಕಂದಾಯ ಇಲಾಖೆಗೆ ಮಾದ್ಯಮದ ಮೂಲಕ ಸೂಚನೆ ನೀಡಿದ್ದಾರೆ.
ಗೋ ಹತ್ಯೆ ಮಾಡದಂತೆ ವಿಶೇಷ ಕಾಯ್ದೆ ಇದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಗೋ ಕಳ್ಳರು ಗೋವನ್ನು ಹಿಂಸಾತ್ಮಕವಾಗಿ ಕೇರಳಕ್ಕೆ ಸಾಗಾಟ ಮಾಡಿ ವಧೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಕಾನೂನು ಬಾಹಿರವಾಗಿ ಗೋ ಹತ್ಯೆ, ಕಳ್ಳತನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು, ಅವರು ಸಾಗಾಟ ಮಾಡಿದ ವಾಹನವನ್ನು ಮುಟ್ಟುಗೋಲು ಹಾಕಬೇಕು. ಜಾಮೀನು ರಹಿತ ಕೇಸು ಹಾಕಿ ಶಾಶ್ವತವಾಗಿ ಜೈಲು ಪಾಲಾಗುವಂತೆ ಮಾಡುವ ಮೂಲಕ ಶಾಂತಿ ಸುವ್ಯವಸ್ಥೆಗೆ ಭಂಗ ಆಗದಂತೆ ಕ್ರಮ ವಹಿಸಬೇಕೆಂದು ಪೊಲೀಸ್ ಮತ್ತು ಕಂದಾಯ ಇಲಾಖೆಗೆ ಸೂಚನೆ ನೀಡಿದ್ದಾರೆ.