ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಿಹಿಸುದ್ದಿ, ವಾರದ ರಜೆ ಮಂಜೂರು ಮಾಡಿದ ಇಲಾಖೆ
ಬೆಂಗಳೂರು: ಆರೋಗ್ಯ ಇಲಾಖೆಯ ಅಡಿಯಲ್ಲಿ ಉದ್ಯೋಗ ಮಾಡುತ್ತಿರುವ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆಯಿಂದ ಸಿಹಿಸುದ್ದಿ ದೊರಕಿದ್ದು, ವಾರದಲ್ಲಿ ಒಂದು ದಿನ ರಜೆ ಅಗತ್ಯವಾಗಿರುವುದರಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಾರದ ರಜೆ ಮಂಜೂರು ಮಾಡಿದೆ.
ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 24-02-2022 ಮತ್ತು 07-07-2022ರಂದು ನಡೆದ ಸಭೆಯಲ್ಲಿ ಈ ಕುರಿತಂತೆ ಚರ್ಚಿಸಿದ್ದು, ಖಾಯಂ ನೌಕರರಂತೆಯೇ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ವಾರಕ್ಕೊಮ್ಮೆ ಒಂದು ದಿನ ರಜೆ ಪಡೆಯಬೇಕಾಗಿರುತ್ತದೆ ಎಂದು ಹೇಳಿದ್ದಾರೆ.
ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ವಾರದ ರಜೆಯ ಕುರಿತು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರಾದಂತ ಅರುಂಧತಿ ಅವರು ಸುತ್ತೋಲೆ ಹೊರಡಿಸಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ವಾರ್ಷಿಕ 10 ದಿನಗಳ ಸಾಂದರ್ಭಿಕ ರಜೆ ಮತ್ತು 10 ದಿನಗಳ ವೈದ್ಯಕೀಯ ರಜೆ ಪಡೆಯಲು ಹಾಗೂ ಗುತ್ತಿಗೆ ಸಿಬ್ಬಂದಿಗಳಿಗೆ 180 ದಿನಗಳ ಮಾತೃತ್ವ ರಜೆ, 15 ದಿನಗಳ ಪಿತೃತ್ವ ರಜೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಎಲ್ಲಾ ಎನ್ ಹೆಚ್ ಎಂ ನೌಕರರು ವಾರಕ್ಕೊಮ್ಮೆ ಕಡ್ಡಾಯವಾಗಿ ಒಂದು ದಿನ ವಾರದ ರಜೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.