ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ತುಳುವಿನಲ್ಲಿ ಯಾಕೆ ಪ್ರಮಾಣವಚನ ಸ್ವೀಕರಿಸಿಲ್ಲ ?!

ಧರ್ಮಸ್ಥಳ ಧರ್ಮಾಧಿಕಾರಿ, ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭಾ ಸದಸ್ಯರಾಗಿ ನಿನ್ನೆ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಅವರು ಕರಾವಳಿಯ ಜನ ಮಾನಸದ ತುಳು ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಬದಲು ಕನ್ನಡದಲ್ಲೇ ಪ್ರಮಾಣ ವಚನಗೈದದ್ದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಬೇಸರ ತಂದಿದೆ. ತುಳುವರು ವೀರೇಂದ್ರ ಹೆಗ್ಗಡೆಯವರು ತುಳುವಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಖುಷಿಯಲ್ಲಿದ್ದರು. ಆದರೆ ಅದು ಹುಸಿಯಾಗಿದೆ.

 

ಡಾ. ವೀರೇಂದ್ರ ಹೆಗ್ಗಡೆ ಅವರು ಪ್ರಮಾಣ ವಚನವನ್ನು ತುಳು ಭಾಷೆಯಲ್ಲಿ ಮಾಡುತ್ತಾರೆಂಬ ತುಳುನಾಡಿನ ಜನತೆಯ ನಿರೀಕ್ಷೆ ನಿನ್ನೆ ಹುಸಿಯಾಗಿತ್ತು. ಏಕೆಂದರೆ, ರಾಜ್ಯಸಭೆಗೆ ನಾಮನಿರ್ದೇಶನ ಆದಾಗ, ಮೊತ್ತ ಮೊದಲು ಅವರು ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುತ್ತೇನೆ ಎಂಬ ಮಾತನ್ನು ಹೇಳಿದ್ದರು. ಹಾಗಾಗಿ ಎಲ್ಲಾ ತುಳುವರಿಗೆ ಇದೊಂದು ಭರವಸೆಯಾಗಿತ್ತು. ಹಾಗಾಗಿ ತುಳುವನಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದರೆ ಒಂದು ಸಂದೇಶ ನೀಡಿದಂತಾಗುತ್ತದೆ. ತುಳು ಭಾಷೆಯ ಲಾಲಿತ್ಯವನ್ನು ಇಡೀ ಸದನಕ್ಕೆ ಕೇಳಿಸುವ ಒಂದು ಸೌಭಾಗ್ಯ ಬಂದಿತ್ತು ಎಂದು ಹೆಚ್ಚಿನ ತುಳುವರು ಭಾವಿಸಿದ್ದರು. ಇದು ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸಲು ಸಹಕಾರಿಯಾಗುತ್ತದೆ. ಆದರೆ ಅವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ತುಳುನಾಡಿನ ಎಲ್ಲರಿಗೂ ಬೇಸರ ತಂದಿದೆ. ಈ ಬಗ್ಗೆ ಅಲ್ಲಲ್ಲಿ ಜನರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ವೀರೇಂದ್ರ ಹೆಗ್ಗಡೆಯವರು ಯಾಕೆ ತುಳುವಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಹಿಂಜರಿದರು?!

ಅಲ್ಲದೆ ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಅವರನ್ನು ಬರಮಾಡಿಕೊಳ್ಳಲು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಸಹಿತ ಹಲವು ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ವೀರೇಂದ್ರ ಹೆಗ್ಗಡೆ ಅವರಿಗೆ ಅವರೆಲ್ಲ ಸೇರಿ ನೆನಪಿಸಬಹುದಿತ್ತು ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.

ಜನರ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ. ಭಾರತದ ಸಂವಿಧಾನದಲ್ಲಿ ಸೆಕ್ಷನ್ 365 ನಲ್ಲಿ 8 ನೇಯ ಪರಿಚ್ಚೇಧ ಇದೆ. ಆದರಲ್ಲಿ ಒಟ್ಟು 22 ಸಂವಿಧಾನ ಮಾನ್ಯತೆ ನೀಡಿದ ಭಾಷೆಗಳಿವೆ. ಅವುಗಳಲ್ಲಿ ಮಾತ್ರ ಪ್ರಮಾಣ ವಚನ ಪಡೆಯಬಹುದು. ದುರದೃಷ್ಟವಶಾತ್ ತುಳು ಭಾಷೆ ಈ ಪಟ್ಟಿಗೆ ಇನ್ನೂ ಏರಿ ಕುಳಿತಿಲ್ಲ.
ಹಿಂದೊಮ್ಮೆ, 2013 ರಲ್ಲಿ ಬೆಳ್ತಂಗಡಿಯ ಶಾಸಕ ವಸಂತ ಬಂಗೇರ ಅವರು ವಿಧಾನ ಸಭೆಯಲ್ಲಿ ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಆ ನಂತರ ಅದು ಗೊತ್ತಾಗಿ, ಸ್ಪೀಕರ್ ಅವರು ಬಂಗೇರ ಅವರನ್ನು ಮರು ಪ್ರಮಾಣ ವಚನ ಸ್ವೀಕರಿಸಲು ಹೇಳಿದ್ದರು. ಹಾಗೆ ಅಂದು ವಸಂತ ಬಂಗೇರ ಎರೆಡೆರಡು ಬಾರಿ ಪ್ರಮಾಣ ವಚನ ಸ್ವೀಕರಿಸುವಂತಾಗಿತ್ತು.

ಈಗ ಇದೇ ಕಾರಣಕ್ಕೆ ವೀರೇಂದ್ರ ಹೆಗ್ಗಡೆ ಅವರು ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ಆಗಲಿಲ್ಲ ಎನ್ನಲಾಗುತ್ತಿದೆ. ಒಂದೊಮ್ಮೆ ತುಳು 8 ನೆಯ ಪರಿಚ್ಚೇಧಕ್ಕೆ ಸೇರಿದರೆ ಆಗ ತುಳುವಿನ ಇಂಪಾದ ಹಾಡಿನಂತಹ ಮಾತನ್ನು ಅಖಂಡ ಭಾರತ ವಾಸಿಗಳು ಕೇಳುವ ಅವಕಾಶ ಸಿಗಬಹುದು.

ಡಾ.ವೀರೇಂದ್ರ ಹೆಗ್ಗಡೆಯವರು ರಾಜ್ಯ ಸಭೆಗೆ ನಾಮನಿರ್ದೇಶನಗೊಂಡಾಗ ತುಳು ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸಲು ಪ್ರಯತ್ನ ಪಡುವ ಮಾತುಗಳನ್ನಾಡಿದ್ದಾರೆ. ವೀರೇಂದ್ರ ಹೆಗ್ಗಡೆಯವರು ತುಳು ಭಾಷೆಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ವಿಶ್ವ ತುಳು ಸಮ್ಮೇಳನದಂತಹ ಐತಿಹಾಸಿಕ ತುಳುವರ ಸಮಾಗಮದ ಕಾರ್ಯಕ್ರಮ ಮಾಡಿರುವುದು,ತುಳು ಲಿಪಿಗೆ ಪೂರಕವಾದ ಕಾರ್ಯಗಳನ್ನು ಮಾಡಿದ್ದು ಗಮನಾರ್ಹ.

ಪ್ರಮಾಣವಚನ ಸ್ವೀಕರಿಸುವ ಭಾಷೆಗಳು ಈ ಕೆಳಗೆ ಇದೆ : ಅಸ್ಸಾಂ, ಬೆಂಗಾಲಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈತಿಲಿ, ಮಲಿಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು, ಉರ್ದು. ಈ ಲಿಸ್ಟಿನಲ್ಲಿ ತುಳು ಸೇರ್ಪಡೆಗಾಗಿ ತುಳು ಜನ ಕಾಯುತ್ತಿದ್ದಾರೆ.

Leave A Reply

Your email address will not be published.