ಮತ್ತೆ ವೃದ್ದಿಸಿದ ಅಡಿಕೆಯ ಮಾನ, ಹಳೆ ಅಡಿಕೆಗೆ 560 ರ ವರಮಾನ | ಚೌತಿಗೂ ಮುನ್ನ ಬೆಲೆ ಏರಿಕೆ, ಕೃಷಿಕ ಫುಲ್ ಖುಷ್ !
ಪುತ್ತೂರು : ಚಿನ್ನ ತನ್ನ ಬೆಲೆಯನ್ನು ಯಾವತ್ತೂ ಕಳೆದುಕೊಳ್ಳುವುದಿಲ್ಲ, ಹಾಗೆಯೇ ಬಂಗಾರದ ಬ್ರದರ್ ಅಡಿಕೆಯ ಬೆಲೆ ಕೂಡಾ. ಚಿನ್ನದ ಬೆಲೆಯ ಪೈಪೋಟಿಯಲ್ಲಿ ಅಡಿಕೆ ಬೆಲೆ ನೆಗೆಯುತ್ತಿದೆ. ಅಡಿಕೆ ಮಾನದಲ್ಲಿ ಮತ್ತೆ ಏರಿಕೆ ಕಂಡಿದೆ. ಹಳೆ ಅಡಿಕೆ ಧಾರಣೆಯಲ್ಲಿ ಮತ್ತೆ 5 ರೂಪಾಯಿ ಏರಿಕೆ ಕಂಡಿದೆ. ಸದ್ಯ 560 ರೂಪಾಯಿಗೆ ಅಡಿಕೆ ಖರೀದಿ ನಡೆಯುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲೂ ಅಡಿಕೆ ಧಾರಣೆ ಏರಿಕೆಯಾಗಿದ್ದು 565 ರೂಪಾಯಿಗೆ ಖರೀದಿಯಾಗುತ್ತಿದೆ. ಖಾಸಗಿ ಖರೀದಿ 5 ರೂಪಾಯಿ ಹೆಚ್ಚಳದಲ್ಲಿ ನಡೀತಿದೆ.
ಖುಷಿ ಪಡಲು ಸಕಾರಣಗಳಿವೆ. ಅತ್ತ ಹಬ್ಬಗಳು ಒಂದೊಂದಾಗಿ ಕ್ಯೂ ನಲ್ಲಿ ನಿಂತು ಮುಂದೆ ಬಂದಂತೆ ಬರುತ್ತಿವೆ. ಚೌತಿ ಹತ್ತಿರದಲ್ಲಿದೆ. ಈಗ ಅಡಿಕೆ ಧಾರಣೆ ಏರಿಕೆ ಕಂಡಿದ್ದು ಬೆಳೆಗಾರನಿಗೆ ಸಂತಸ ತಂದಿದೆ. ಒಟ್ಟಿನಲ್ಲಿ ಬೆಳೆಗಾರರಿಗೆ ಚೌತಿ ಕೊಡುಗೆ ಭರ್ಜರಿಯಾಗಿ ದೊರೆತಿದೆ. ಚೌತಿಗೂ ಮುನ್ನ ಬೆಲೆ ಏರಿಕೆಯಾಗಿದ್ದು, ಚೌತಿ ಬಳಿಕ ಮತ್ತಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ.
ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಈ ಬಾರಿ ಹಳೆ ಅಡಿಕೆ ಧಾರಣೆ 5 ರೂಪಾಯಿ ಕ್ಯಾಂಪ್ಕೋ ಏರಿಕೆ ಮಾಡಿದೆ. ಸೋಮವಾರ 555 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡಿತ್ತು. ಇದು ಮಾರುಕಟ್ಟೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಕ್ಯಾಂಪ್ಕೋ ಹಾಗೂ ಹೊರ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯ ಪೈಪೋಟಿ ಮುಂದುವರಿಯುವ ಸಾಧ್ಯತೆ ಇದ್ದು ಮತ್ತಷ್ಟು ಬೆಲೆ ಏರಿಕೆ ಕಾರಣವಾಗಲಿದೆ. ದುಡ್ಡು ಬರುವ ಪೈಪೋಟಿ ನೋಡಿ ಅಡಿಕೆ ಬೆಳೆಗಾರ ತೋಟಕ್ಕೆ ಇಳಿದಿದ್ದಾನೆ. ವೆಲಪ ಮಳೆ ಬಿಡುವು ಪಡೆದುಕೊಂಡ ಅವಕಾಶ ಬಳಸಿಕೊಳ್ಳುತ್ತಿರುವ ಆತ, ಕೊಳೆರೋಗಕ್ಕೆ ಮದ್ದು ಹೊಡೆಯುವುದರಲ್ಲಿ ಬಿಸಿ. ಆದರೆ ಅಡಿಕೆಗೆ ಮದ್ದು ಬಿಡಲು ತಂತ್ರಜ್ಞರ ಕೊರತೆ. ಇವತ್ತು ಅಡಿಕೆಗೆ ಮದ್ದು ಬಿಡುವವರಿಗೆ ಇರುವಷ್ಟುನ್ ಡಿಮಾಂಡ್ ಯಾರಿಗೂ ಇರಲಿಕ್ಕಿಲ್ಲ. ಯಾಕೆಂದ್ರೆ ವಿಪರೀತ ಶ್ರಮ ಬೇಡುವ, ಹಕ್ಕಿಯ ಹಗುರಾದ ದೇಹಪ್ರಕೃತಿ ಉಳ್ಳ ಕಸುಬುದಾರರು ಮಾತ್ರ, ಮಳೆಗಾಲದ ನಿಮಿತ್ತ ಜಾರುವ ಮರವನ್ನು ಕೂಡಾ ಉಡದಂತೆ ಹತ್ತಬಲ್ಲರು. ಅಡಿಕೆಗೆ ಬೆಲೆ ಏರಿದಂತೆ ಮದ್ದು ಬಿಡುವವರಿಗೆ ಇನ್ನಷ್ಟು ಡಿಮಾಂಡ್. ಏನೇ ಇರಲಿ, ಕೃಷಿಕ ಖುಷಿಖುಷಿಯಾಗಿ ಇರುವುದಂತೂ ಸುಳ್ಳಲ್ಲ.