ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ

ನವದೆಹಲಿ : ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭಾ ಸದಸ್ಯರಾಗಿ ಇಂದು ದೇವರ ಹೆಸರಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು.

 

ಸಂಸತ್ತಿನಲ್ಲಿ ಮಳೆಗಾಲದ ಅಧಿವೇಶನ ನಡೆಯುತ್ತಿದ್ದು, ಅದರೊಂದಿಗೆ ರಾಷ್ಟ್ರಪತಿ ಚುನಾವಣೆಯ ಭರಾಟೆಯೂ ಜೋರಾಗಿದೆ. ಈ ನಡುವೆ ಮೇಲ್ಮನೆಯಲ್ಲಿ ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭವೂ ನಡೆಯುತ್ತಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆ, ಸಂಗೀತ ನಿರ್ದೇಶಕ ಇಳಯರಾಜ, ಅಥೇಟ್ ಪಿ.ಟಿ. ಉಷಾ ಹಾಗೂ ಚಲನಚಿತ್ರ ಕಥೆಗಾರ ವಿ.ವಿಜಯೇಂದ್ರ ಪ್ರಸಾದ್ ಅವರನ್ನು ಜುಲೈ 6ರಂದು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿತ್ತು.

ನಿನ್ನೆಯಷ್ಟೇ ಖ್ಯಾತ ಆಟಗಾರ್ತಿ ಪಿ ಟಿ ಉಷಾ, ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇಂದು ಹೆಗ್ಗಡೆಯವರು ಮೇಲ್ಮನೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಪ್ರಮಾಣವಚನ ಸ್ವೀಕಾರ ಹಿನ್ನೆಲೆಯಲ್ಲಿ, ಹೆಗ್ಗಡೆಯವರು ನಿನ್ನೆಯೇ ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನವದೆಹಲಿಗೆ ಪ್ರಯಾಣಿಸಿದ್ದಾರೆ. ಇಂದು ರಾಜ್ಯಸಭೆಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ತಮ್ಮ 20ನೇ ವಯಸ್ಸಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ ವೀರೇಂದ್ರ ಹೆಗ್ಗಡೆಯವರು, 1968ರಿಂದಲೂ ಧರ್ಮಾಧಿಕಾರಿಯಾಗಿ ಹಲವಾರು ಸಮಾಜಮುಖಿ ಕಾರ್ಯಗಳಿಗೆ ಸಾಕ್ಷಿಯಾಗಿದ್ದಾರೆ. ಶಿಕ್ಷಣ ಕ್ಷೇತ್ರ, ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕಾಗಿ ಇವರು ಯುವಕರನ್ನು ಪ್ರೇರೇಪಿಸಿದ ಬಗೆ ಅಮೋಘ. ಸ್ವಯಂ ಉದ್ಯೋಗಾವಕಾಶಗಳ ಬಗ್ಗೆ ಅರಿವು ನೀಡಲು ಮತ್ತು ಗ್ರಾಮೀಣ ಯುವಕರಿಗೆ ತರಬೇತಿ ನೀಡಲು ಅವರು ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯನ್ನು ಕೂಡಾ ಸ್ಥಾಪಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಮಾಡಬಹುದಾದ ಹಲವು ಕಾರ್ಯಗಳನ್ನು ಖಾಸಗಿಯಾಗಿ ಮಾಡಿಸಿದ್ದಾರೆ.

Leave A Reply

Your email address will not be published.