ಬೆಳ್ತಂಗಡಿ | ನಟೋರಿಯಸ್ ಕ್ರಿಮಿನಲ್ ಮಾತೃಶ್ರೀ ಫೈನಾನ್ಸ್ ಮಾಲಕ ಬಾಲಕೃಷ್ಣ ಸುವರ್ಣ ಅರೆಸ್ಟ್ | ದುಡ್ಡು ಕಂಡಲ್ಲಿ ಗುಂಡಿ ತೋಡುವುದೇ ಈತನ ಫುಲ್ ಟೈಮ್ ಕಾಯಕ
ಮಂಗಳೂರು : ನಕಲಿ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕ್ ಸಾಲ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನಂತೆ ಮಂಗಳೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ವಂಚನೆ ಪ್ರಕರಣದಲ್ಲಿರುವ ಪ್ರಮುಖ ಆರೋಪಿಗಳು ಮಂಗಳೂರು ಬಜ್ಪೆಯ ಕೊಳಂಬೆ ನಿವಾಸಿ ಕಿರಣ್ ಕುಮಾರ್(41), ಮಂಗಳೂರು ಜಪ್ಪುವಿನ ಕುಡುಪಾಡಿ ಹಾಲಿ ನಿವಾಸಿ, ಈ ಹಿಂದೆ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ದೇಕಿನಕಟ್ಟೆ ನಿವಾಸಿಯಾಗಿದ್ದ ಬಾಲಕೃಷ್ಣ ಸುವರ್ಣ(38), ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ದೀಕ್ಷಿತ್ ರಾಜ್(32) ಬಂಧಿತರು.
ತಮ್ಮ ಬ್ಯಾಂಕ್ ಗೆ ಮೋಸ ಮಾಡಿದ ಆರೋಪದ ಮೇಲೆ, ಬ್ಯಾಂಕ್ ಮ್ಯಾನೇಜರ್ ದೂರಿನಂತೆ, ಮಂಗಳೂರು ಪೊಲೀಸರು ಆರೋಪಿಗಳನ್ನು ಮಂಗಳವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿ, ನಂತರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆಯ ವಿವರ :
ಮಂಗಳೂರಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕರಂಗಲಪಾಡಿ ಶಾಖೆಯಿಂದ ಕಳೆದ ಎರಡು ವರ್ಷದ ಹಿಂದೆ ಬಾಲಕೃಷ್ಣ ಸುವರ್ಣ ಎಂಬಾತ ತನ್ನ ಸ್ನೇಹಿತ ಕಿರಣ್ ಕುಮಾರ್ ಎಂಬಾತನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ನೀಡಿ 36 ಲಕ್ಷ ರೂಪಾಯಿ ಲೋನ್ ಪಡೆದಿದ್ದಾನೆ.
ಈ ಸಾಲಕ್ಕೆ ಬಾಲಕೃಷ್ಣ ಸುವರ್ಣ ಮತ್ತು ದೀಕ್ಷಿತ್ ರಾಜ್ ಎಂಬವರು ಜಾಮೀನು ಹಾಕಿದ್ದರು. ಆದ್ರೆ ಈ ಸಾಲದ ಮೊತ್ತವನ್ನು ವಾಪಸ್ ಕಟ್ಟದೆ ಸುಮ್ಮನಿದ್ದರು. ಈ ವೇಳೆ ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ಕೆಲ ದಿನಗಳ ಹಿಂದೆ ಪರಿಶೀಲನೆ ಮಾಡಿದಾಗ, ನಕಲಿ ದಾಖಲೆಗಳೆಂದು ಬೆಳಕಿಗೆ ಬಂದಿದೆ. ನಂತರ ಬ್ಯಾಂಕ್ ಮ್ಯಾನೇಜರ್ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಲಕೃಷ್ಣ ಪೂಜಾರಿಯ ಕ್ರಿಮಿನಲ್ ಹಿನ್ನಲೆ :
ಬಾಲಕೃಷ್ಣ ಸುವರ್ಣ ಒಂದು ಕಾಲದಲ್ಲಿ ಓರ್ವ ಮಾಮೂಲಿ ಆಟೋ ಡ್ರೈವರ್. ಆದರೆ ಮನಸ್ಸಿನಲ್ಲಿ ಕಳ್ಳ ಬುದ್ದಿ ಇತ್ತಲ್ಲ, ಅದಕ್ಕಾಗಿ ಆತ ಒಂದೊಂದೇ ಕಳ್ಳತನದ ಅಕೌಂಟ್ ಓಪನ್ ಮಾಡುತ್ತಾ ಹೋದ. ಮೊದಲು ಧರ್ಮಸ್ಥಳದಲ್ಲಿ ಪೆಟ್ರೋಲ್ ಕಳ್ಳತನ ಮಾಡಿದ. ದುಡ್ಡು ಬಂತು, ಜತೆಗೇ ಕೆಟ್ಟ ಹೆಸರು. ಈತ ಮೂಲತಃ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ದೇಯಿನಕಟ್ಟೆ ನಿವಾಸಿಯಾಗಿದ್ದು ಬಡಕುಟುಂಬದವ. ಪುಂಜಾಲಕಟ್ಟೆಯಲ್ಲಿ ಮೊದಲು ಆಟೋದಲ್ಲಿ ಟ್ರಿಪ್ ದುಡಿಯುತ್ತಿದ್ದ. ಒಮ್ಮೆ ಕಳ್ಳ ದುಡ್ಡಿನ ರುಚಿ ಕಂಡಿದ್ದ ಈತ, ಮೊದಲಿಗೆ ಧರ್ಮಸ್ಥಳದ ಕನ್ಯಾಡಿಯಲ್ಲಿ “ಮಾತೃಶ್ರೀ ಫೈನಾಸ್ಸ್ “ಎಂಬ ಸಂಸ್ಥೆಯನ್ನು ಶುರು ಮಾಡಿದ. ಆತನ ಪೈನಾಸ್ಸ್ ಪಿಗ್ಮಿ ಖಾತೆಗೆ ಸಾರ್ವಜನಿಕರು10 ನೂರರ ಡಿನಾ ಮಿನೇಶನ್ ನಲ್ಲಿ ದಿನದ ಗಳಿಕೆಯ ಒಂದಷ್ಟು ದುಡ್ಡು ಕಟ್ಟಲು ಪ್ರಾರಂಭಿಸಿದರು. ಜನರ ದುಡ್ಡು ನೂರು ಲಕ್ಷವಾಗಿ ಸಂಸ್ಥೆ ಸ್ವಲ್ಪ ಮಟ್ಟಿಗೆ ಬೆಳೆದು ಮುಂದೆ ಹೋಗಿದೆ. ನಂತರ, ವರ್ಷ ಕಳೆದಂತೆ ಉಜಿರೆಯಲ್ಲಿ ಎರಡನೇ ಪೈನಾಸ್ಸ್ ಶಾಖೆ ತೆರೆದು ವ್ಯವಹಾರ ಶುರುಮಾಡಿದ್ದಾರೆ. ಅಲ್ಲಿಂದ ಆತನಿಗೆ ಶುಕ್ರದೆಸೆ ಪ್ರಾರಂಭವಾಗಿದೆ. ಬೇಡ ಬೇಡ ಅಂದರೂ ಪಿಗ್ಮಿ ದುಡ್ಡು ಭರ್ತಿಯಾಗಿ ತುಂಬಿಕೊಂಡಿದೆ. ದುಡ್ಡಿನ ಜೊತೆಗೆ ದುರಾಸೆ ಕೂಡಾ.
ದುಡ್ಡು ತನದಲ್ಲದಿದ್ದರೂ ಅದು ತನ್ನದೇ ಎಂದು ಅಂದುಕೊಂಡು ಧರ್ಮಸ್ಥಳದ ಪಕ್ಕದ ನಾರ್ಯ ಎಂಬಲ್ಲಿ ಎರಡು ಅಂತಸ್ತಿನ ಮನೆ ಖರೀದಿಸಿದ. ಸಿಕ್ಕ ಸಿಕ್ಕ ವ್ಯವಹಾರಗಳಿಗೆ ಕೈ ಹಾಕಿದ. ಏಕಾ ಏಕಿ ಶ್ರೀಮಂತನಾಗಿ ಹೋದ.
ಶ್ರೀಮಂತ ಎಂದು ಹೇಳಿಕೊಂಡು ಒಂದು ಮದುವೆ ಕೂಡ ಮಾಡಿಕೊಂಡ. ಆದ್ರೆ ಕ್ರಮೇಣ ಪಿಗ್ಮಿ ದುಡ್ಡು ವಾಪಸ್ ಕೊಡಬೇಕಾಗಿ ಬಂದಾಗ ಸಾರ್ವಜನಿಕರ ಲಕ್ಷಾಂತರ ಹಣದ ಜೊತೆಗೆ ಯಾರಿಗೂ ತಿಳಿಸದೆ ಎರಡು ಪೈನಾಸ್ಸ್ ಗೂ ಬೀಗಹಾಕಿ ಪರಾರಿಯಾದ.
ಮಂಗಳೂರು ಸೇರಿಕೊಂಡು ಅಲ್ಲಿ ಮನೆಯೊಂದನ್ನು ಮಾಡಿ ಅಲ್ಲಿ ವಾಸವಿದ್ದ. ಒಮ್ಮೆ ಧರ್ಮಸ್ಥಳದ ದೊಂಡೊಲೆ ಬಳಿ ಇರುವ ಪೆಟ್ರೋನೆಟ್ ಸಂಸ್ಥೆಯ ಪೈಪ್ ಲೈನ್ ಗೆ ಕನ್ನಹಾಕಿ ಪೆಟ್ರೋಲ್ ಕಳ್ಳತನ ವ್ಯವಹಾರ ಮಾಡಿ ಕೊನೆಗೆ ಬೆಳ್ತಂಗಡಿ ಪೊಲೀಸರ ಕೈಗೆ ಟ್ಯಾಂಕರ್ ಸಮೇತ ರೆಡ್ ಹ್ಯಾಂಡ್ ಸಿಕ್ಕಿಬಿದ್ದ. ಆಗ ಆತನ ಕೈಗೆ ಅಂಟಿಕೊಂಡಿದ್ದ ಗ್ರೀಸ್ ನ ಸಮೇತ ಪೊಲೀಸರು ಆತನನ್ನು ಎಳೆದುಕೊಂಡು ಹೋಗಿದ್ದರು. ನಂತರ ಬಿಡುಗಡೆಗೊಂಡು ಮಂಗಳೂರಲ್ಲಿ ಮೀಟರ್ ಬಡ್ಡಿ ವ್ಯವಹಾರ ಮಾಡಿಕೊಂಡ ವಾಸವಾಗಿದ್ದ ಎನ್ನುವ ಅನುಮಾನ ಜನರಿಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿ ಹಗರಣದಲ್ಲೂ ಬಾಲಕೃಷ್ಣ ಸುವರ್ಣ ಆರೋಪಿ:
ದುಡ್ಡು ಎಲ್ಲಿರುತ್ತದೆಯೋ, ಅಲ್ಲಿ ಗುಂಡಿ ತೋಡಲು ಬಾಲಕೃಷ್ಣ ರೆಡಿ. ಕೇವಲ ಉಗುರಿನಲ್ಲಿ ಭಾವಿ ಎಷ್ಟು ದೊಡ್ಡ ಗುಂಡಿ ತೋಡುವ ನಿಷ್ಣಾತ ಈ ಬಾಲಕೃಷ್ಣ ಸುವರ್ಣ. ಇಲ್ಲದೇ ಹೋದರೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಯ ಹಣಕ್ಕೆ ಕಣ್ಯಾಡಿಯೆಂಬ ಗೂಗಲ್ ಮ್ಯಾಪ್ ಕೂಡಾ ಗುರುತಿಸಲು ಪರದಾಡುವ ಸಣ್ಣ ಊರಿನಲ್ಲಿ ಕುಳಿತು ಸ್ಕೆಚ್ ಬರೆಯಲು ಯಾರಿಗಾದ್ರೂ ಸಾಧ್ಯವೇ ? ಆ ಬಗ್ಗೆ ಮೂಡಬಿದಿರೆ ಸ್ಟೇಟ್ ಬ್ಯಾಂಕ್ ನಲ್ಲಿ ನಕಲಿ ಚೆಕ್, ಸೀಲ್ ಮತ್ತು ಸಹಿ ಬಳಸಿ 56 ಕೋಟಿ ರೂಪಾಯಿ ಹಣ ಡ್ರಾ ಮಾಡಲು ಪ್ರಯತ್ನಿಸಿದ್ದ. ಎಲ್ಲಾ ಕೆಲಸವನ್ನೂ ಯಾವುದೇ ಅನುಮಾನ ಬರದ ತರ ನಿಭಾಯಿಸಿದ್ದ. ಆದರೆ ಅಲ್ಲಿನ ಬ್ಯಾಂಕ್ ಸಿಬ್ಬಂದಿಗಳು, ಯಾವುದಕ್ಕೂ ಇರಲಿ ಎಂದು ಆಂಧ್ರಪ್ರದೇಶ ಸರಕಾರಕ್ಕೆ ಒಂದು ಸಲ ಕೇಳಿ ನೀಡುವ ಎಂದು ಅಲ್ಲಿನ ಸರ್ಕಾರಕ್ಕೆ ಮಾಹಿತಿ ಕೊಟ್ಟಿದ್ದರು. ಆಗ ಅಲ್ಲಿ ನಕಲಿ ಚೆಕ್ ಎಂದು ತಿಳಿದ ಬಳಿಕ ಆಂದ್ರಪ್ರದೇಶದ ತುಲ್ಲೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಬಳಿಕ ಆಂಧ್ರಪ್ರದೇಶದ ಪೊಲೀಸರು ಮಂಗಳೂರು ಪೊಲೀಸರ ಸಹಾಯದಿಂದ ಪ್ರಕರಣದಲ್ಲಿ ಭಾಗಿಯಾದ ಆರು ಜನರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದರು. ಬಳಿಕ ಈ ಪ್ರಕರಣವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಿಐಡಿ ಹಾಗೂ ಎಸಿಬಿಗೆ ವಹಿಸಲಾಗಿತ್ತು. ಅವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಜೈಲಿಗೆ ಕಳುಹಿಸಿದ್ದರು. ಈ ಪ್ರಕರಣದಲ್ಲಿ ಬಾಲಕೃಷ್ಣ ಸುವರ್ಣ ಕೂಡ ಒಬ್ಬನಾಗಿದ್ದು, ಮೂರು ತಿಂಗಳು ಆಂಧ್ರಪ್ರದೇಶದ ಜೈಲಿನಲ್ಲಿದ್ದು ಆಂಧ್ರದ ಗುಂಟೂರ್ ಮೆಣಸಿನ ಕಾಯಿ ಹಾಕಿದ ಊಟದ ಜತೆ ಖಾರ ಟ್ರೀಟ್ಮೆಂಟ್ ಕೊಟ್ಟಿದ್ದರು ಆಂಧ್ರ ಪೊಲೀಸರು.
ಅಲ್ಲಿಂದ ಬಂದ ಮೇಲೆ ಕೂಡ ಆತ ಸರಿಯಾಗಲಿಲ್ಲ. ದೊಡ್ಡ ಡಾನ್ ತರ ತನ್ನ ಹಿಂದೆ ಮುಂದೆ ಬಾಡಿ ಗಾರ್ಡ್ ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದ. ಒಮ್ಮೆ ಒಂದು ಮನೆಯಲ್ಲಿ ವೇಶ್ಯಾವಾಟಿಕೆ ನಡೆಸಿ ಸಿಕ್ಕಿಬಿದ್ದಿದ್ದ. ಬಹುಶಃ ಎಲ್ಲಾ ಆರ್ಥಿಕ ಅಪರಾಧ ಮಾಡಬೇಕೆಂದು ನಿರ್ಧರಿಸಿದವನ ಹಾಗೆ ಆಡುತ್ತಿದ್ದ.
ಬಾಲಕೃಷ್ಣ ಸುವರ್ಣ ನ ಭಾವ ಕೂಡ ಬಂಧನ:
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೆ ನಕಲಿ ದಾಖಲೆ ಸಲ್ಲಿಸಿ ಸಾಲ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ, ಬಾಲಕೃಷ್ಣ ಪೂಜಾರಿಯ ಹೆಂಡತಿಯ ತಮ್ಮನಾದ ಬೆಳ್ತಂಗಡಿ ತಾಲೂಕಿನ ಸೋಣಾಂದೂರು ಗ್ರಾಮದ ದೀಕ್ಷಿತ್ ರಾಜ್ ನನ್ನು ತಾನು ಮಾಡುವ 36 ಲಕ್ಷ ಸಾಲಕ್ಕೆ ಉಪಾಯದಿಂದ ಜಾಮೀನು ಹಾಕಿಸಿ ಇದೀಗ ಭಾವನ ಜೊತೆಯಲ್ಲಿ ಸ್ನೇಹಿತನನ್ನು ಕೂಡ ಜೈಲು ಸೇರುವಂತೆ ಮಾಡಿದ್ದಾನೆ ಈತ.