ಹೆಂಡತಿ ಅಂದುಕೊಂಡು ಅತ್ತೆಯ ತಲೆಗೆ ಸುತ್ತಿಗೆ ಬಡಿದು ಕೊಂದ ಅಳಿಯ | ಕಾರಣವಾಯಿತೇ ಅತ್ತೆ ಉಟ್ಟುಕೊಂಡಿದ್ದ ಆ ಬಣ್ಣದ ಸೀರೆ?
ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಅತ್ತೆಯನ್ನು ಕೊಲೆಗೈದಿದ್ದ ಅಳಿಯನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಕೊಲೆಯ ಕಾರಣ ಕೇಳಿ ಬಿದ್ದಿದ್ದಾರೆ.
ಹೊಸಕೋಟೆಯ ನಡವಟ್ಟಿ ಗ್ರಾಮದ ನಿವಾಸಿ ನಾಗರಾಜ (35) ಬಂಧಿತ. ಸೌಭಾಗ್ಯ(45) ಕೊಲೆಯಾದ ಮಹಿಳೆ. ಕ್ಯಾಬ್ ಚಾಲಕನಾಗಿರುವ ನಾಗರಾಜು 6 ವರ್ಷಗಳ ಸೌಭಾಗ್ಯರ ಪುತ್ರಿ ಭವ್ಯರನ್ನು ಮದುವೆಯಾಗಿದ್ದ. ದಂಪತಿಗೆ 5 ವರ್ಷದ ಮಗಳು ಕೂಡಾ ಇದ್ದಾಳೆ. ಮದ್ಯ ವ್ಯಸನಿಯಾಗಿರುವ ಆರೋಪಿ, ಸಣ್ಣ ವಿಚಾರಗಳಿಗೆ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅದರಿಂದ ಬೇಸತ್ತ ಭವ್ಯ ತನ್ನ ಪುತ್ರಿ ಜತೆ ತವರು ಮನೆಗೆ ಹೋಗಿದ್ದು, ಜೀವನ ನಿರ್ವಹಣೆಗಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು.
ಈ ನಡುವೆ ವಿವಾಹ ವಿಚ್ಛೇದನಕ್ಕೆ ಸಿದ್ಧತೆ ಮಾಡಿಕೊಂಡಿದ್ದಳು ಕೂಡಾ. ಈ ವಿಚಾರ ತಿಳಿದ ನಾಗರಾಜ, ಅತ್ತೆ ಮನೆಗೆ ಬಂದು ಪತ್ನಿ ಮತ್ತು ಮಗಳನ್ನು ತನ್ನೊಂದಿಗೆ ಕಳುಹಿಸುವಂತೆ ಗಲಾಟೆ ಮಾಡುತ್ತಿದ್ದ. ಆದರೆ, ಅತ್ತೆ ಸೌಭಾಗ್ಯ ಮಗಳನ್ನು ಕಳುಹಿಸಲು ನಿರಾಕರಿಸಿದ್ದರು. ಅದರಿಂದ ಆಕ್ರೋಶಗೊಂಡಿದ್ದ ಆರೋಪಿ ಜು.12 ರಂದು ಅತ್ತೆ ಮನೆಗೆ ಬಂದಿದ್ದ. ಬರುವಾಗ ಕುಡಿದಿದ್ದ. ಬಂದು ಗಲಾಟೆ ಮಾಡಿ ಹೊರಟು ಹೋಗಿದ್ದ. ಮರುದಿನ ಎಂದಿನಂತೆ ಮಂಜುನಾಥನಗರದ ಆಟೋನಿಲ್ದಾಣದ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಅತ್ತೆ ಸೌಭಾಗ್ಯ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಜು.13 ರಂದು ಸಂಜೆ 7.30ಕ್ಕೆ ತರಕಾರಿ ಅಂಗಡಿ ಬಳಿ ಬಂದು ಸೌಭಾಗ್ಯರಿಗೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ತೀವ್ರ ಗಾಯಗೊಂಡಿದ್ದ ಸೌಭಾಗ್ಯ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಆದರೆ ವಿಚಾರಣೆ ವೇಳೆ “ಅತ್ತೆ ಸೌಭಾಗ್ಯರನ್ನು ಕೊಲ್ಲುವ ಉದ್ದೇಶ ನನಗೆ ಇರಲಿಲ್ಲ. ನಾನು ಪತ್ನಿಯನ್ನು ಕೊಲ್ಲಲು ನಿರ್ಧರಿಸಿದ್ದೆ. ಆದರೆ ಅಲ್ಲಿ ತರಕಾರಿ ಹೋದಾಗ ಅಲ್ಲಿ ಹೆಂಡತಿಯನ್ನು ಕಂಡೆ. ಕುಡಿದ ಮತ್ತಿನಲ್ಲಿ ಹೊಡೆದು ಕೊಂದು ಬಿಟ್ಟೆ. ಆಮೇಲೆ ಗೊತ್ತಾಯ್ತು, ತಪ್ಪು ನಡೆದಿದೆ ಅಂತ.’ ಹೆಂಡತಿ ಉಡುತ್ತಿದ್ದ ಸೀರೆಯನ್ನು ಆಕೆಯ ಅಮ್ಮ ಉಟ್ಟ ಪರಿಣಾಮ ಮತ್ತು ಆರೋಪಿ ಎಣ್ಣೆ ಮತ್ತಿನಲ್ಲಿದ್ದ ಕಾರಣ ಈ ಕೊಲೆ ನಡೆದಿದೆ ಎನ್ನಲಾಗಿದೆ.