ಬೆಳ್ತಂಗಡಿ : ‘ಗುಂಡಿ ಮುಚ್ಚಿ ಜೀವ ಉಳಿಸಿ’ ಕಾಂಗ್ರೆಸ್ ನಿಂದ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ !!!

ಬೆಳ್ತಂಗಡಿ : “ಗುಂಡಿ ಮುಚ್ಚಿ ಜೀವ ಉಳಿಸಿ’ ಎಂಬ ಧೈಯ ವಾಕ್ಯದಲ್ಲಿ ಮುಖ್ಯ ರಸ್ತೆ ಅವ್ಯವಸ್ಥೆ ಬಗ್ಗೆ ನಗರ ಹಾಗೂ ಗ್ರಾಮೀಣ ಯುವ ಕಾಂಗ್ರೆಸ್ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ಅಂಗವಾಗಿ ರಸ್ತೆಯ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ಮಾಡಲಾಯಿತು.

 

‘ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಚು ಇಂಚಿಗೆ ಅಪಾಯಕಾರಿ ಗುಂಡಿಗಳಿದ್ದು, ಅಪಘಾತಕ್ಕೆ ಕಾರಣವಾಗಿದೆ. ಕನಿಷ್ಠ ಅದನ್ನು ದುರಸ್ತಿ ಮಾಡುವ ಕೆಲಸ ಮಾಡಬೇಕಾದ ಶಾಸಕರು ಮೋಜು ಮಸ್ತಿಯಲ್ಲಿ ನಿರತರಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ನಗರ ಯುವ ಕಾಂಗ್ರೆಸ್‌ನ ಅಧ್ಯಕ್ಷ ಅನಿಲ್ ಪೈ ಮಾತನಾಡಿದ್ದಾರೆ.

ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಾಲೂಕಿನ ರಾಜ್ಯ ಹೆದ್ದಾರಿಗಳಲ್ಲಿ ಗುಂಡಿಯೋ ಗುಂಡಿ. ಇದನ್ನು ನೋಡಿದಾಗ ಒಂದು ಮಾತು ನೆನಪಿಗೆ ಬರುತ್ತದೆ. ಗುಂಡಿಯಲ್ಲಿ ರಸ್ತೆಯೋ ಅಥವಾ ರಸ್ತೆಯಲ್ಲಿ ಗುಂಡಿಯೋ ಎಂದು. ಶಾಸಕ ಹರೀಶ್ ಪೂಂಜಾ ತಾಲೂಕಿನ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಶೀಘ್ರದಲ್ಲಿ ಗುಂಡಿಯನ್ನು ಮುಚ್ಚದಿದ್ದರೆ ತಾಲೂಕಿನಾದ್ಯಂತ ಗ್ರಾಮ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಯಲ್ಲಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕೊಕ್ಕಡ, ಮಾಜಿ ತಾಲ್ಲೂಕು ಸದಸ್ಯ ಪ್ರವೀಣ್ ಕೊಯ್ಯುರು, ಯುವ ಇಂಟಕ್ ಅಧ್ಯಕ್ಷ ನವೀನ್ ಸಾವಣಲು, ಅಲ್ಪಸಂಖ್ಯಾತ ಘಟಕದ ನಗರ ಅಧ್ಯಕ್ಷ ಸಲೀಂ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವತ್ ರಾಜ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಂದೀಪ್ ನೀರ, ಪ್ರಜ್ವಲ್ ಜೈನ್,ಗಣೇಶ್ ಕಣಿಯೂರು,ಆರೀಫ್ ಬೆಳ್ತಂಗಡಿ ಪ್ರದೇಶದ ಗಣ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Leave A Reply

Your email address will not be published.