ಉದ್ಧವ್ ಠಾಕ್ರೆಗೆ ಮತ್ತೊಂದು “ಶಾಕ್” ನೀಡಿದ ಶಿಂಧೆ ಬಣ!!!
ಮಹಾರಾಷ್ಟ್ರದ ರಾಜಕಾರಣ ಎಲ್ಲೆಡೆ ಸದ್ದು ಮಾಡಿದ್ದು, ರಾಜಕೀಯದಲ್ಲಿ ಹೀಗೂ ಆಗಬಹುದು ಎಂಬ ಸಂದೇಶ ನೀಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಶಿವಸೇನೆಯಿಂದ ಹೊರಬಂದು ಮುಖ್ಯಮಂತ್ರಿಯಾಗಿರುವ ಶಿಂಧೆ ಹಾಗೂ ಅವರ ಬಣ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಮತ್ತೊಂದು ಆಘಾತ ನೀಡಿದೆ.
ಠಾಕ್ರೆ ಬಣದ 12 ಸಂಸದರು ಇನ್ನು ಕೆಲವೇ
ದಿನಗಳಲ್ಲಿ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಮೂಲಗಳ
ಪ್ರಕಾರ, ಈ ಎಲ್ಲಾ ಸಂಸದರು ಸೋಮವಾರದಂದೇ
ದೆಹಲಿಗೆ ಹೊರಡಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಮುಖ್ಯಮಂತ್ರಿ ಶಿಂಧೆ ಕೂಡ ಸೋಮವಾರ ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಮುಖ್ಯಮಂತ್ರಿಯಾದ ಹೊಸತರದಲ್ಲಿ ಅವರು ಹಾಗೂ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಶಿವಸೇನೆಯಲ್ಲಿ ಸದ್ಯಕ್ಕೆ 18 ಸಂಸದರಿದ್ದಾರೆ. ಇವರಲ್ಲಿ
ಶಿಂಧೆ ಬಣದೊಂದಿಗೆ ಸಂಪರ್ಕದಲ್ಲಿರುವವರೆಂದರೆ, ಧೈರ್ಯಶೀಲ್ ಸಂಭಾಜಿರಾವ್ ಮಾನೆ, ಸದಾಶಿವ ಲೋಖಂಡೆ, ಹೇಮಂತ್ ಗೋಡ್ರೆ, ಹೇಮಂತ್ ಪಾಟೀಲ್, ರಾಜೇಂದ್ರ ಗವಿತ್, ಸಂಜಯ್ ಮಾಂಡಲಿಕ್, ಶ್ರೀಕಾಂತ್ ಶಿಂಧೆ, ಶ್ರೀರಂಗ್ ಬಾರ್ನೆ, ರಾಹುಲ್ ಶೆವಾಲೆ, ಪ್ರತಾಪರಾವ್, ಗಣಪತ್ ರಾವ್ ಜಾಧವ್, ಕೃಪಾಲ್ ತುಮನೆ, ಭಾವನಾ.
ಶಿಂಧೆ ಬಣದ ಪರವಾಗಿ ಕೆಲಸ ಮಾಡಿದ ಆರೋಪದಡಿ ಠಾಕ್ರೆಯವರು, ಮಹಾರಾಷ್ಟ್ರದ ಮಾಜಿ ಪ್ರವಾಸೋದ್ಯಮ ಸಚಿವ ವಿಜಯ್ ಶಿವತಾರೆ, ಹಿಂಗೋಲಿ ಜಿಲ್ಲೆಯ ಶಿವಸೇನೆ ಅಧ್ಯಕ್ಷ ಶಾಸಕ ಸಂತೋಷ್ ಬಂಗಾರ್, ಥಾಣೆಯ ಶಿವಸೇನೆಯ ಜಿಲ್ಲಾ ಪ್ರಮುಖ್ ಆದ ನರೇಶ್ ಮಾಸ್ಕೆ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಹೇಳಲಾಗಿದೆ.