ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇರಳದ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ದೃಢ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ
ಮಂಗಳೂರು : ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇರಳದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
ಜುಲೈ 13 ರಂದು ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇರಳದ ಕಣ್ಣೂರು ಮೂಲದ ಪ್ರಯಾಣಿಕರೊಬ್ಬರಿಗೆ ಮಂಕಿಪಾಕ್ಸ್ ದೃಢವಾಗಿದ್ದು, ಈಗ ಕಣ್ಣೂರು ಜಿಲ್ಲೆಯ ಪರಿಯಾರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಕುರಿತು ಮಾಹಿತಿ ನೀಡಿದಂತ ದಕ್ಷಿಣಕನ್ನಡ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಅವರು, ‘ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳಿರುವ ವಾರ್ಡ್ ಅನ್ನು ಮಂಕಿಪಾಕ್ಸ್ ರೋಗಿಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದೆ’ ಎಂದಿದ್ದಾರೆ.
ರಾಜ್ಯದ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಕೂಡ ಘೋಷಣೆ ಮಾಡಿದೆ. ವಿದೇಶದಿಂದ ಆಗಮಿಸುವ ಪ್ರಯಾಣಿಕರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಈವರೆಗೆ ಯಾವುದೇ ಮಂಗನಕಾಯಿಲೆ ಪ್ರಕರಣಗಳು ವರದಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಕೋರೋನವೈರಸ್ ನಂತಹ ರೋಗವು ವೇಗವಾಗಿ ಹರಡುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ಅವರು ಹೇಳಿದ್ದಾರೆ.