ಇನ್ನು ಮುಂದೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ರಕ್ತದಾನ ಶಿಕ್ಷೆ!
ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ಪೊಲೀಸರು ದಂಡ ವಿಧಿಸುತ್ತಾರೆ. ಈ ನಿಯಮ ಉಲ್ಲಂಘಿಸಿದರೆ ಇಂತಿಷ್ಟು ದಂಡ ಎಂದು ಪಾವತಿಸಬೇಕಾಗುತ್ತದೆ. ಆದರೆ ಪಂಜಾಬ್‌ನಲ್ಲಿ ಇನ್ನು ಮುಂದೆ ನಿಯಮ ಉಲ್ಲಂಘಿಸಿದವರಿಗೆ ವಿಭಿನ್ನವಾದ ಶಿಕ್ಷೆ ನೀಡಲು ಸರ್ಕಾರ ಮುಂದಾಗಿದೆ.
ಹೌದು. ಪಂಜಾಬ್‌ನಲ್ಲಿ ಇನ್ನು ಮುಂದೆ ನಿಯಮ ಉಲ್ಲಂಘಿಸಿದವರಿಗೆ ದಂಡ ತೆರುವ ಜತೆಯಲ್ಲಿ ಸಮಾಜ ಸೇವೆಯನ್ನೂ ಮಾಡಬೇಕು ಎಂಬ ನಿಯಮ ಹೊರಡಿಸಿದೆ. ಅತಿ ವೇಗವಾಗಿ ಚಲಿಸುವವರು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಸ್ಥಳೀಯ ಆಸ್ಪತ್ರೆಯಲ್ಲಿ ಕನಿಷ್ಠ 2 ಗಂಟೆಗಳ ಕಾಲ ಸೇವೆ ಮಾಡಬೇಕು ಅಥವಾ ರಕ್ತದಾನ ಮಾಡಬೇಕು.
ಹಾಗೆಯೇ ಸಾರಿಗೆ ಅಧಿಕಾರಿಗಳು 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವ ರಿಫ್ರೆಶರ್ ಕೋರ್ಸ್‌ನ್ನೂ ಇವರೇ ನಡೆಸಿಕೊಡಬೇಕು. ಕನಿಷ್ಠ 2 ಗಂಟೆಗಳ ಕಾಲ 20 ವಿದ್ಯಾರ್ಥಿಗಳಿಗೆ ಕೋರ್ಸ್ ಮಾಡಿಸಿದ ನಂತರ ಅವರಿಗೆ ಪ್ರಮಾಣ ಪತ್ರ ಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.