ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ, ಮಹತ್ವದ ಮಸೂದೆಗಳ ಮಂಡನೆಗೆ ಸಿದ್ಧತೆ
ನವದೆಹಲಿ: ಇಂದಿನಿಂದ ಸಂಸತ್ತಿನಲ್ಲಿ ಭಾರತದ 15 ನೇ ರಾಷ್ಟ್ರಪತಿ ಚುನಾವಣೆಯೊಂದಿಗೆ ಮುಂಗಾರು ಅಧಿವೇಶನ ಆರಂಭವಾಗಲಿದೆ.
ಅಧಿವೇಶನದಲ್ಲಿ, ಕೇಂದ್ರವು ಪತ್ರಿಕಾ ನೋಂದಣಿ ನಿಯತಕಾಲಿಕಗಳ ಮಸೂದೆ ಸೇರಿದಂತೆ 24 ಮಸೂದೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಇಂದು ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಿದ್ದು, ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್ 12 ರಂದು ಮುಕ್ತಾಯವಾಗಲಿದೆ. ಈ ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಚುನಾವಣೆ ನಡೆಯಲಿದೆ.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಇಬ್ಬರು ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಈ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಕಂಟೋನ್ಮೆಂಟ್ ಮಸೂದೆ, ಮಲ್ಟಿ ಸ್ಟೇಟ್ ಕೋ-ಅಪರೇಟಿವ್ ಸೊಸೈಟೀಸ್ ಮಸೂದೆ, ತಮಿಳುನಾಡು ಮತ್ತು ಛತ್ತೀಸ್‌ಘಡದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪರಿಷ್ಕೃತ ಪಟ್ಟಿಗೆ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ ಒಟ್ಟು 24 ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು. ಅಷ್ಟೇ ಅಲ್ಲದೇ, ಉಭಯ ಸದನಗಳಲ್ಲಿ ಬಾಕಿ ಉಳಿದಿರುವ ಇತರೆ 8 ಮಸೂದೆಗಳು ಅನುಮೋದನೆಗೆ ಕಾಯುತ್ತಿದ್ದು, ಸಂಸತ್ತಿನಲ್ಲಿ ಮಂಡನೆಯಾಗಲಿವೆ ಎನ್ನಲಾಗಿದೆ.