ಹಳಿತಪ್ಪಿದ ಗೂಡ್ಸ್ ರೈಲು: ಸಂಚಾರದಲ್ಲಿ ವ್ಯತ್ಯಯ
ಗುಜರಾತ್: ಗೂಡ್ಸ್ ರೈಲು ಹಳಿತಪ್ಪಿದ ಕಾರಣ ಇಂದು ಗುಜರಾತ್‌ನಲ್ಲಿ ರೈಲು ಸಂಚಾರ ಸದ್ಯ ಸ್ಥಗಿತಗೊಂಡಿದೆ.
ವರದಿಗಳ ಪ್ರಕಾರ, ಮಂಗಲ್ ಮಹುದಿ-ಲಿಮ್ಖೇಡಾ ನಿಲ್ದಾಣಗಳ ನಡುವೆ ರೈಲಿನ 16 ಬೋಗಿಗಳು ಹಳಿತಪ್ಪಿದ್ದು, ಇದರಿಂದಾಗಿ ವಿದ್ಯುತ್ ಪೂರೈಕೆಗೆ ಹಾನಿಯಾಗಿದೆ. ಇನ್ನೂ, ಹಳಿತಪ್ಪಿದ ಪರಿಣಾಮ ಮುಂಬೈ-ದೆಹಲಿ ನಡುವೆ ಸಂಚರಿಸುವ ರೈಲುಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಈ ಘಟನೆ ಬೆಳಿಗ್ಗೆ 12.30 ರ ಸುಮಾರಿಗೆ ಸಂಭವಿಸಿದೆ. ತಂಡಗಳು ಲೈನ್‌ಗಳನ್ನು ಮರುಸ್ಥಾಪಿಸುವ ಕೆಲಸವನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ರೈಲ್ವೇ ಮೂಲಗಳು, ವಡೋದರಾದಿಂದ ಬಂದ ಗೂಡ್ಸ್ ರೈಲು ಉತ್ತರದ ಕಡೆಗೆ ಹೋಗುತ್ತಿದ್ದಾಗ ಹಳಿತಪ್ಪಿದಾಗ ಕೆಲವು ಬೋಗಿಗಳ ಚಕ್ರಗಳು ಬೇರ್ಪಟ್ಟು ಮುರಿದು ಬಿದ್ದಿದ್ದು, ಬೋಗಿಗಳು ಒಂದರ ಮೇಲೊಂದು ಬಿದ್ದಿದ್ದರಿಂದ ಓವರ್ ಹೆಡ್ ವಿದ್ಯುತ್ ಸರಬರಾಜು ಮಾರ್ಗಕ್ಕೆ ಹಾನಿಯಾಗಿದೆ.
ಘಟನೆಯ ನಂತರ ಪಶ್ಚಿಮ ರೈಲ್ವೇ ಅಧಿಕಾರಿಗಳು ಟ್ವೀಟ್ ಮಾಡಿದ್ದು, ರೈಲು ಹಳಿ ತಪ್ಪಿದ ಪರಿಣಾಮ, ಸುಮಾರು 27 ಪ್ಯಾಸೆಂಜರ್ ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ದೆಹಲಿಯಿಂದ ಬರುವ ರೈಲುಗಳನ್ನು ರತ್ಲಂ-ಚಿತ್ತೋರ್‌ಗಢ-ಅಜ್ಮೀರ್ ಪಾಲನ್‌ಪುರ್-ಅಹಮದಾಬಾದ್-ವಡೋದರಾ ಮಾರ್ಗದಲ್ಲಿ ತಿರುಗಿಸಲಾಗಿದೆ. ಮುಂಬೈನಿಂದ ದೆಹಲಿಗೆ ಹೋಗುವ ರೈಲುಗಳನ್ನು ಛಾಯಾಪುರಿ- ಅಹಮದಾಬಾದ್- ಪಾಲನ್‌ಪುರ್- ಅಜ್ಮೀರ್-ಜೈಪುರಕ್ಕೆ ತಿರುಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.