ಕರೆಂಟ್ ಬಿಲ್ ನೋಡಿದ ವ್ಯಕ್ತಿ ವಿದ್ಯುತ್ ಕಂಬವನ್ನೇ ಏರಿ ಕುಳಿತ, ಅಷ್ಟಕ್ಕೂ ಅಲ್ಲಿ ಆಗಿದ್ದೇನು!?
ಕೋಪದಲ್ಲಿ ಯಾವುದೇ ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ಮಾತಿದೆ. ಆ ಕ್ಷಣದಲ್ಲಿ ಅದೆಂತಹ ನಿರ್ಧಾರ ತೆಗೆದುಕೊಂಡರೂ ನಾವು ಆಪತ್ತಿಗೆ ಸಿಲುಕೋದರಲ್ಲಿ ಡೌಟ್ ಇಲ್ಲ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕರೆಂಟ್ ಬಿಲ್ ಮೊತ್ತವನ್ನು ನೋಡಿ ರೊಚ್ಚಿಗೆದ್ದು ವಿದ್ಯುತ್ ಕಂಬವನ್ನೇ ಏರಿ ಕುಳಿತ್ತಿದ್ದಾನೆ.
ಹೌದು. ಉಚಿತವಾಗಿ ವಿದ್ಯುತ್ ಸಂಪರ್ಕ ಹೊಂದಿದ ವ್ಯಕ್ತಿಯೊಬ್ಬ, ತನಗೆ ದೊಡ್ಡ ಮೊತ್ತದ ಬಿಲ್ ಬಂದದ್ದನ್ನು ಕಂಡು ವಿದ್ಯುತ್ ಕಂಬವನ್ನೇ ಏರಿ ಕುಳಿತ ಘಟನೆ ಉತ್ತರ ಪ್ರದೇಶದ ಸರಾಯಿ ಅಕಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಂದಾ ಗ್ರಾಮದಲ್ಲಿ ನಡೆದಿದೆ.
ಅಶೋಕ್ ಕುಮಾರ್ ಎಂಬ ವ್ಯಕ್ತಿಯೇ ಈ ದುಸ್ಸಾಹಸಕ್ಕೆ ಕೈಹಾಕಿದ್ದು, ಹೈವೋಲ್ವೇಜ್ ವಿದ್ಯುತ್ ಟವರ್ ಏರಿ ಕುಳಿತಿದ್ದಾರೆ. ಇವರ ಈ ವರ್ತನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವಣೆ ಸೃಷ್ಟಿಯಾಗಿತ್ತು.
ನಿಧಾನವಾಗಿ ವ್ಯಕ್ತಿ ವಿದ್ಯುತ್ ತಂತಿಗಳ ಮೇಲೆ ನಡೆದುಕೊಂಡೇ ಮುಂದೆ ಸಾಗಿದ್ದಾರೆ. ಆದರೆ ಅದೃಷ್ಟ ಚೆನ್ನಾಗಿತ್ತು. ಅವನು ಕಂಬ ಏರುವ ಹೊತ್ತಿಗೆ ವಿದ್ಯುತ್ ಹರಿಯುತ್ತಿರಲಿಲ್ಲ. ಪರಿಣಾಮ ದುರಂತದಿಂದ ಪಾರಾಗಿದ್ದಾರೆ.
ಅಶೋಕ್ ಕುಮಾರ್ ಕೃಷಿಕನಾಗಿದ್ದು, ಸೌಭಾಗ್ಯ ಯೋಜನೆಯಡಿ ಮೂರು ವರ್ಷಗಳ ಹಿಂದೆ ಉಚಿತ ವಿದ್ಯುತ್ ಸಂಪರ್ಕ ಪಡೆದಿದ್ದರು. ಆದರೂ ನಿರಂತರವಾಗಿ ಕರೆಂಟ್ ಬಿಲ್ ಬರುತ್ತಿತ್ತು. ಮೊನ್ನೆ ಶನಿವಾರ 8,700 ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಇದರಿಂದ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ಈ ಪರಿಯ ಬಿಲ್ ನೋಡಿದ ಅಶೋಕ್ ಸಿಕ್ಕಾಪಟ್ಟೆ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎನ್ನಲಾಗಿದೆ. ಅಧಿಕಾರಿಗಳಲ್ಲಿ ಎಷ್ಟೇ ಮನವಿ ಮಾಡಿಕೊಂಡರೂ, ತಮಗೆ ಉಚಿತ ವಿದ್ಯುತ್ ಸೌಲಭ್ಯ ಇದೆ ಎಂದರೂ ಕೇಳದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದು ಹೈವೋಲ್ವೇಜ್ ವಿದ್ಯುತ್ ತಂತಿ ಮೇಲೇರಿದ್ದಾರೆ.
ಆದರೆ ಪತಿ ವಿದ್ಯುತ್ ತಂತಿ ಏರಿದ ವಿಷಯ ಪತ್ನಿಗೆ ಗೊತ್ತೇ ಇರಲಿಲ್ಲ. ಪತ್ನಿ ಗದ್ದೆಗೆ ಬಂದಾಗ ತನ್ನ ಪತಿ ವಿದ್ಯುತ್ ಕಂಬದಲ್ಲಿ ಇದ್ದಿದ್ದನ್ನು ನೋಡಿ ಶಾಕ್ ಆದ ಪತ್ನಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಅಶೋಕ್ ಅವರನ್ನು ಕೆಳಗೆ ಇಳಿಸಿದ್ದಾರೆ. ತಂತಿಯಲ್ಲಿ ಕರೆಂಟ್ ಬರದ ಕಾರಣ ಭಾರಿ ಅನಾಹುತದಿಂದ ಪಾರಾಗಿದ್ದಾರೆ.