ಉಕ್ಕಿ ಹರಿಯುತ್ತಿರುವ ನದಿಯಲ್ಲಿ ದುಸ್ಸಾಹಸ ಮೆರೆದ ಯುವಕ ನೋಡ-ನೋಡುತ್ತಿದ್ದಂತೆಯೇ ಕೊಚ್ಚಿಯೇ ಹೋದ- ವೀಡಿಯೋ ವೈರಲ್

ಇಂದಿನ ಯುವಸಮೂಹ ಎಲ್ಲಿ? ಹೇಗೆ ಎಂಜಾಯ್ ಮಾಡೋದೆಂದು ಕಾದುಕೂತಿರುತ್ತಾರೆ. ಜೀವಕ್ಕೆ ಅಪಾಯ ಎಂದು ಅರಿತಿದ್ದರು ಸಾಹಸಕ್ಕೆ ಕೈ ಹಾಕುತ್ತಾರೆ. ಅದೇ ರೀತಿ ಇಲ್ಲೊಬ್ಬ, ಮಳೆರಾಯನ ಆರ್ಭಟ ಅರಿತಿದ್ದರೂ, ದುಸ್ಸಾಹಸ ಮೆರೆದು ಪ್ರಾಣವನ್ನೇ ಕಳೆದುಕೊಂದಿದ್ದಾನೆ.

 

ಯುವಕನೊಬ್ಬ ಉಕ್ಕಿ ಹರಿಯುತ್ತಿರುವ ನದಿಗೆ ಹಾರಿ ನಾಪತ್ತೆಯಾಗಿರುವ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದ್ದು, ಯುವಕ ನದಿಗೆ ಹಾರುವ ವಿಡಿಯೋ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಸೇತುವೆ ಮೇಲೆ ನಿಂತು ಉಕ್ಕಿ ಹರಿಯುತ್ತಿರುವ ನದಿಗೆ ಹಾರುವುದನ್ನು ತೋರಿಸುತ್ತದೆ.

ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಭಾರೀ ಮಳೆಯಿಂದಾಗಿ ಗಿರ್ನಾ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಈ ವೇಳೆ ಬಿಸಿ ರಕ್ತದ ಯುವಕ ದುಸ್ಸಾಹಸಕ್ಕೆ ಇಳಿದು ಜೀವಕ್ಕೆ ಕುತ್ತು ತಂದಿದ್ದಾನೆ. ಯುವಕ ನದಿಗೆ ಹಾರುವುದನ್ನು ವಿಡಿಯೋ ಮಾಡಲಾಗಿದ್ದು, ಒಂದಷ್ಟು ಮಂದಿ ಆತನ ಸಾಹಸವನ್ನು ನೋಡಲು ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಯುವಕ ಹಾರುವಾಗ ಓಹ್ ಎಂದು ಹುರಿದುಂಬಿಸುವಂತೆ ಚೀರಾಡುವುದನ್ನು ವಿಡಿಯೋದಲ್ಲಿ ಕೇಳಿಸಬಹುದು.

ಆದರೆ, ನದಿಗೆ ಹಾರಿದ ನಂತರ ಯುವಕ ಮೇಲೆಬರದೆ ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ನದಿಯಲ್ಲಿ ನಾಪತ್ತೆಯಾದವನನ್ನು ನಯೀಮ್ ಅಮೀನ್ ಎಂದು ಗುರುತಿಸಲಾಗಿದ್ದು, ಅಧಿಕಾರಿಗಳು ಈತನ ಪತ್ತೆಗಾಗಿ ಗುರುವಾರ ತಡರಾತ್ರಿಯವರೆಗೂ ಹುಡುಕಾಡಿದರೂ ಪತ್ತೆಯಾಗಲಿಲ್ಲ.

Leave A Reply

Your email address will not be published.