ರಾಷ್ಟ್ರಪತಿ ಚುನಾವಣೆ ಹಿನ್ನೆಲೆ । ಜುಲೈ18 ತನಕ ಬಿಜೆಪಿಯ ಶಾಸಕರು ಮತ್ತು ಸಂಸದರು ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುವಂತೆ ಬಿಜೆಪಿ ಆದೇಶ

ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಮುಗಿಯುವವರೆಗೂ ತನ್ನ 122 ಶಾಸಕರು ಮತ್ತು 25 ಸಂಸದರು ನಗರದ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುವಂತೆ, ತಕ್ಷಣದಿಂದ ಜಾರಿ ಆಗುವಂತೆ ಬಿಜೆಪಿ ಆದೇಶ ಹೊರಡಿಸಿದೆ.

 

ಶನಿವಾರವೇ ಹೋಟೆಲ್ ಗೆ ಬಂದು ಸೇರುವಂತೆ ಮುಖ್ಯಸಚೇತಕ ಎಂ.ಸತೀಶ್‌ ರೆಡ್ಡಿ ಅವರು ಈಗಾಗಲೇ ಎಲ್ಲ ಶಾಸಕರಿಗೂ ಸಂದೇಶ ಕಳುಹಿಸಿದ್ದಾರೆ. ಜುಲೈ 18 ರಂದು ಸೋಮವಾರ ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಯಾವ ರೀತಿ ಮತದಾನ ಮಾಡಬೇಕು ಎಂಬುದರ ಬಗ್ಗೆ ಇದೇ ಹೊಟೇಲ್‌ನಲ್ಲಿ ಭಾನುವಾರ ಅಣಕು ಮತದಾನ ನಡೆಸಲಾಗುವುದು. ಇದಕ್ಕಾಗಿ ದೆಹಲಿಯಲ್ಲಿ ಮೂವರು ನಾಯಕರಿಗೆ ತರಬೇತಿ ನೀಡಿ ಟ್ರೈನರ್ ಅನ್ನು ಈಗಾಗಲೇ ಕಳುಹಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತಮ್ಮ ಪ್ರವಾಸ ಕಾರ್ಯಕ್ರಮಗಳ ಕಾರಣದಿಂದ ವಿನಾಯಿತಿ ಕೋರಿರುವ ಕೆಲವು ಸಚಿವರನ್ನು ಹೊರತುಪಡಿಸಿ, ಉಳಿದವರೆಲ್ಲರೂ ಹೋಟೆಲ್‌ನಲ್ಲಿರುವ ನಿರೀಕ್ಷೆಯಿದೆ. ಹೊಟೇಲ್‌ನಲ್ಲಿ ಬಂಧಿಸಿದಂತೆ ಮಾಡಿ ಸಾಧಿಸುವುದಾದರೂ ಏನು? ದ್ರೌಪದಿ ಮುರ್ಮು ಗೆಲ್ಲುವುದರಲ್ಲಿ ಸಂಶಯವೂ ಇಲ್ಲ. ಎನ್‌ಡಿಎಯೇತರ ಪಕ್ಷಗಳೂ ಅವರನ್ನು ಬೆಂಬಲಿಸಿದೆ. ಆದ್ದರಿಂದ ಅತಿವೃಷ್ಟಿ ಈ ಸಂದರ್ಭದಲ್ಲಿ ಮೂರು ದಿನ ಬೆಂಗಳೂರಿನಲ್ಲೇ ಉಳಿಯಬೇಕು ಎಂದು ಕಡ್ಡಾಯಗೊಳಿಸುವುದು ಸರಿಯಲ್ಲ ಎಂದು ಹಲವು ಶಾಸಕರು ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟಕ್ಕೂ ರಾಷ್ಟ್ರಪತಿ ಚುನಾವಣೆ ವಿಪ್‌ ಜಾರಿ ಮಾಡುವಂತಿಲ್ಲ, ಭದ್ರ ಮಾಡಿ ಇಡುವ ಅಗತ್ಯ ಇರಲಿಲ್ಲ ಎನ್ನುವುದು ಬಿಜೆಪಿ ವಲಯಗಳಿಂದಲೇ ಕೇಳಿಬರುತ್ತಿರುವ ಮಾತು.

Leave A Reply

Your email address will not be published.