ಗ್ರಾಹಕರಿಗೆ ದೊರೆಯಲಿದೆ ‘ದುರಸ್ತಿಯ ಹಕ್ಕು’, ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರಕಾರ
ಗ್ರಾಹಕರಿಗೆ ತಾವು ಖರೀದಿಸುವ ವಸ್ತುಗಳ ರಿಪೇರಿಯ ಹಕ್ಕನ್ನು ಖಾತರಿಪಡಿಸುವ ಉದ್ದೇಶದಿಂದ, ದೇಶದಲ್ಲಿ “ದುರಸ್ತಿಯ ಹಕ್ಕು’ ಜಾರಿ ಮಾಡಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಈ ಕುರಿತು ಸಮಗ್ರ ನೀತಿಯನ್ನು ರೂಪಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಸಮಿತಿಯೊಂದನ್ನು ರಚಿಸಿದೆ.
ಗ್ರಾಹಕರು ಒಂದು ವಸ್ತುವನ್ನು ಖರೀದಿಸಿದ ನಂತರ ಅದನ್ನು ಆತ ಸುಲಭವಾಗಿ ಮತ್ತು ಕೈಗೆಟಕುವ ಬೆಲೆಗೆ ರಿಪೇರಿ ಮತ್ತು ಬದಲಾವಣೆ ಮಾಡಿಸುವಂತೆ ಆಗಬೇಕು ಎನ್ನುವುದೇ ‘ರಿಪೇರಿ ಹಕ್ಕು’ ಜಾರಿಗೆ ತರುವುದರ ಹಿಂದಿನ ಉದ್ದೇಶವಾಗಿದೆ ಎಂದು ಹೇಳಿದೆ.
ರಿಪೇರಿಯ ಹಕ್ಕಿನ ಹಿಂದೆ ಒಂದು ತರ್ಕ ಇದೆ. ಗ್ರಾಹಕ ಉತ್ಪನ್ನವೊಂದನ್ನು ಖರೀದಿಸಿದಾಗ, ಆತ ಅದರ ಸಂಪೂರ್ಣ ಮಾಲೀಕನಾಗುತ್ತಾನೆ. ಅದನ್ನು ನ್ಯಾಯಸಮ್ಮತ ಬೆಲೆಗೆ ರಿಪೇರಿ ಮಾಡಿಸಿಕೊಳ್ಳುವ ಹಾಗೂ ಅದರಲ್ಲಿ ಬದಲಾವಣೆ ಮಾಡಿಕೊಳ್ಳುವ ಅಧಿಕಾರವೂ ಇರಬೇಕು. ಆತ ತಯಾರಕರ ಮರ್ಜಿಯಲ್ಲಿ ಇರಬಾರದು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಹೆಚ್ಚುವರಿ ಕಾರ್ಯದರ್ಶಿ ನಿಧಿ ಖೇರ್ ನೇತೃತ್ವದ ಸಮಿತಿಯೊಂದನ್ನು ರಚಿಸಿದ್ದು, ‘ರಿಪೇರಿ ಹಕ್ಕು’ ಕುರಿತ ರೂಪುರೇಷೆಯನ್ನು ಅದು ಸಿದ್ಧಪಡಿಸಲಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ. ಇದು ಜಾರಿಯಾದರೆ ಕೃಷಿ ಉಪಕರಣಗಳು, ಮೊಬೈಲ್ ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಗೃಹೋಪಯೋಗಿ ವಸ್ತುಗಳು, ಆಟೋಮೊಬೈಲ್‌ಗಳು/ ಆಟೋಮೊಬೈಲ್ ಬಿಡಿಭಾಗಗಳು ಕೆಟ್ಟರೆ ಅಧಿಕೃತ ಮಾರಾಟಗಾರರು ಮತ್ತು ಸೇವಾ ಕೇಂದ್ರಗಳಲ್ಲಿಯೇ ದುರಸ್ತಿ ಮಾಡಬೇಕು ಎಂಬ ನಿಯಮವು ರದ್ದಾಗಲಿದೆ. ಗ್ರಾಹಕರು ತಮಗೆ ಬೇಕಾದ ಕಡೆ ದುರಸ್ತಿ ಮಾಡಿಸಿಕೊಳ್ಳುವ ಅಧಿಕಾರ ಪಡೆಯುತ್ತಾರೆ.
ಜತೆಗೆ ಯಾವುದೇ ಡಿವೈಸ್‌ಗಳ ಸರ್ವೀಸ್‌ಗೆ ಅಗತ್ಯವಿರುವ ಬಿಡಿಭಾಗಗಳು, ಸಲಕರಣೆಗಳು ಇನ್ನು ಮುಂದೆ ಥರ್ಡ್ ಪಾರ್ಟಿಗೂ ಲಭ್ಯವಾಗುವಂತೆ ಮಾಡುವ ನಿಯಮವೂ ಜಾರಿಯಾಗಲಿದೆ. ಆಗ ಸಣ್ಣಪುಟ್ಟ ಸಮಸ್ಯೆಯಾದಾಗ ಸ್ಥಳೀಯ ಮಟ್ಟದಲ್ಲೇ ದುರಸ್ತಿ ಮಾಡುವವರು ದುರಸ್ತಿ ಮಾಡಬಹುದು.
ಸಾಮಾನ್ಯವಾಗಿ ಉತ್ಪಾದಕ ಕಂಪೆನಿಗಳು ತಮ್ಮ ಉತ್ಪನ್ನಗಳ ಬಿಡಿಭಾಗಗಳು ಮತ್ತಿತರ ಎಲ್ಲ ವಸ್ತುಗಳ ವಿನ್ಯಾಸದ ಒಡೆತನವು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿರುವಂತೆ ನೋಡಿಕೊಳ್ಳುತ್ತವೆ. ಆದರೆ ಈ ಏಕಸ್ವಾಮ್ಯವು ಗ್ರಾಹಕರ ದುರಸ್ತಿ ಆಯ್ಕೆಯ “ಹಕ್ಕನ್ನು’ ಕಸಿದುಕೊಂಡಂತೆ ಎಂದು ಸರಕಾರ ಪ್ರತಿಪಾದಿಸಿದೆ. ಈ ಏಕಸ್ವಾಮ್ಯವನ್ನು ತಪ್ಪಿಸುವುದೇ ಸರಕಾರದ ಉದ್ದೇಶ.
ರಿಪೇರಿ ಹಕ್ಕು ಇರಬೇಕಾದ ಪ್ರಮುಖ ವಲಯಗಳನ್ನು ಸಮಿತಿಯು ಜುಲೈ 13ರ ಸಭೆಯಲ್ಲಿ ಗುರುತಿಸಿದೆ. ಕೃಷಿ ಉಪಕರಣಗಳು, ಮೊಬೈಲ್ ಫೋನ್, ಟ್ಯಾಬ್‌ಗಳು, ವಾಹನಗಳಲ್ಲಿ ಬಳಸುವ ಸಲಕರಣೆಗಳನ್ನು ಗುರುತಿಸಲಾಗಿದೆ. ಉಪಕರಣಗಳ ರಿಪೇರಿಗೆ ಅಗತ್ಯವಿರುವ ಬಿಡಿಭಾಗಗಳು ಹಾಗೂ ಸಲಕರಣೆಗಳು ಇತರರಿಗೂ ಲಭ್ಯವಾಗುವಂತೆ ಕಂಪನಿಗಳು ಮಾಡಬೇಕು. ಆಗ, ಸಣ್ಣಪುಟ್ಟ ಸಮಸ್ಯೆಗಳು ಎದುರಾದರೆ ರಿಪೇರಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ವಿಷಯವೂ ಪ್ರಸ್ತಾಪವಾಗಿದೆ. ಅಮೆರಿಕ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟದಲ್ಲಿ ರಿಪೇರಿಯ ಹಕ್ಕನ್ನು ಗುರುತಿಸಲಾಗಿದೆ.
ಈ ರಿಪೇರಿ ಹಕ್ಕಿನಿಂದ ಗ್ರಾಹಕರಿಗೆ ಹೆಚ್ಚಿನ ಅಧಿಕಾರ ದೊರೆಯುತ್ತದೆ. ಸಾಮಗ್ರಿಗಳ ಉತ್ಪಾದಕರು ಮತ್ತು ಥರ್ಡ್ ಪಾರ್ಟಿ ಗ್ರಾಹಕರು, ಮಾರಾಟಗಾರರ ನಡುವೆ ಉತ್ತಮ ವ್ಯಾಪಾರ ಸಂಬಂಧ ಮೂಡಿಸುತ್ತದೆ. ಇ-ತ್ಯಾಜ್ಯಗಳ ಪ್ರಮಾಣವನ್ನು ತಗ್ಗಿಸುವುದು, ಪರಿಸರಸ್ನೇಹಿ ಜೀವನಶೈಲಿಗೆ ಪ್ರೋತ್ಸಾಹ ನೀಡುವುದಷ್ಟೇ ಅಲ್ಲದೆ ಉದ್ಯೋಗಾವಕಾಶ ಸೃಷ್ಟಿಯೂ ಆಗುತ್ತದೆ.