ಮಂಗಳೂರು :‌ಕಡಲ್ಕೊರೆತ, ಮರವಂತೆ ಮಾದರಿ ತಡೆಗೋಡೆಗೆ ಬೇಡಿಕೆ| ಮೀನಕಳಿಯದಲ್ಲಿ ಅಬ್ಬರಿಸಿದ ಸಮುದ್ರರಾಜ!

ಮಂಗಳೂರು: ಕರಾವಳಿಯಾದ್ಯಂತ ಮಳೆ ಅಬ್ಬರ ಹೆಚ್ಚಿದೆ. ಜನ ಭಯದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಕಡಲಬ್ಬರ ಹೆಚ್ಚಿದ್ದು, ಕಡಲ ಬದಿಯ ಸ್ಥಳೀಯ ನಿವಾಸಿಗಳು ಹಗಲು ರಾತ್ರಿ ನಿದ್ದೆ ಇಲ್ಲದೆ ತತ್ತರಿಸಿ ಹೋಗಿದ್ದಾರೆ. ಹೌದು ಈ ಸ್ಥಳೀಯರು ಬೇಡಿಕೆಯೊಂದನ್ನು ಇಟ್ಟಿದ್ದಾರೆ.

ಕಡಲ್ಕೊರೆತ ನಿಯಂತ್ರಣಕ್ಕಾಗಿ ಮರವಂತೆ ಮಾದರಿಯಲ್ಲಿ ತಡೆಗೋಡೆ ನಿರ್ಮಿಸಬೇಕೆಂದು ಬೈಕಂಪಾಡಿ ಮೀನಕಳಿಯ ನಿವಾಸಿಗಳ ಆಶಯ.
ಈ ಭಾಗದಲ್ಲಿದ್ದ ಮೀನು ಮಾರುಕಟ್ಟೆಗೆ ದಕ್ಷಿಣದಲ್ಲಿ ಸುಮಾರು 8 ಮನೆಗಳಿಗೆ ಹಾನಿಯಾಗಿದ್ದು, ಈ ಮನೆಗಳ ನಿವಾಸಿಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಹಲವಾರು ತೆಂಗಿನ ಮರಗಳು ಬುಡಮೇಲಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ.

ಬೈಕಂಪಾಡಿ ಮೀನಕಳಿಯಲ್ಲಿ ಸಮುದ್ರ ಕೊರೆತ ಗುರುವಾರವೂ ಮುಂದುವರಿದಿದೆ. ಗುರುವಾರ ಉತ್ತರದ ಕಡೆಗೆ ಆರ್ಭಟ ತೋರಿಸಿದ ಕಡಲಿನ ಅಲೆಗಳು ಕಾಂಕ್ರೀಟ್ ರಸ್ತೆಯ ಇನ್ನಷ್ಟು ಭಾಗಗಳನ್ನು ತನ್ನತ್ತ ಎಳೆದುಕೊಂಡಿದೆ. ಇದರಿಂದಾಗಿ ಪಕ್ಕದ ಮನೆಗಳು ಅಪಾಯ ಭೀತಿ ಎದುರಿಸುತ್ತಿವೆ.

ಸಮುದ್ರಕ್ಕೆ ಕಲ್ಲುಹಾಕಿ ತಡೆಗೋಡೆ ನಿರ್ಮಿಸುವುದರಿಂದ ಆಸುಪಾಸು ಪ್ರದೇಶಕ್ಕೆ ಸಮುದ್ರ ವ್ಯಾಪಿಸುತ್ತಿದೆ. ಈ ಕಲ್ಲು ಹಾಕುವುದರಿಂದ ಮೀನುಗಾರಿಕೆ ನಡೆಸಲು ದೋಣಿ ಇತ್ಯಾದಿಗಳನ್ನು ಸಮುದ್ರಕ್ಕೆ ಕೊಂಡೊಯ್ಯುವ ಸಮಯದಲ್ಲಿ ಕಲ್ಲಿನ ತಡೆಗೋಡೆ ಅಡ್ಡಿಯಾಗುತ್ತಿದೆ ಎಂದು ಮೀನುಗಾರರು ತಮ್ಮ ಕಷ್ಟ ಅವಲತ್ತುಕೊಂಡಿದ್ದಾರೆ.

ಮರವಂತೆ ಮಾದರಿಯಲ್ಲಿ ತುರ್ತು ಅಗತ್ಯ ಇರುವ ಕಡೆ 125 ಮೀ. ಉದ್ದಕ್ಕೆ ತಡೆಗೋಡೆ ನಿರ್ಮಾಣಕ್ಕೆ ಇಲಾಖೆ ಸಿದ್ಧತೆ ನಡೆಸಿದೆ. ಆದರೆ, ಭಾಗಶಃ ತಡೆಗೋಡೆ ಬೇಡ. ಇದರಿಂದ ಪಕ್ಕದ ಬೇರೆ ಜಾಗದಲ್ಲಿ ಕಡಲ್ಕೊರೆತ ಕಾಣಿಸಿಕೊಳ್ಳಲಿದೆ ಎಂಬ ಭೀತಿಯಿಂದ ಚಿತ್ರಾಪುರ ಚಾನೆಲ್‌ನಿಂದ ಕೂರಿಕಟ್ಟದವರೆಗೆ ಮರವಂತೆ ಮಾದರಿಯಲ್ಲಿ ತಡೆಗೋಡೆಗೆ ಬೇಡಿಕೆ ಇರಿಸಲಾಗಿತ್ತು. ಇದಕ್ಕೆ 20 ಕೋಟಿ ರೂ.ಗೂ ಹೆಚ್ಚು ಅನುದಾನ ಬೇಕು. ಅಷ್ಟು ಅನುದಾನ ಒಮ್ಮೆಗೆ ತರುವುದು ಕಷ್ಟ ಎಂದು ಮೂಲಗಳು ತಿಳಿಸಿವೆ.

ಮರವಂತೆ ಮಾದರಿಯಲ್ಲಿ (ಗ್ರೆಯಾನ್ ರೀತಿ) ತಡೆಗೋಡೆ ನಿರ್ಮಿಸಲು ಕಳೆದ ಫೆಬ್ರವರಿಯಲ್ಲಿ ಪ್ರಸ್ತಾಪ ಕಳುಹಿಸಲಾಗಿದೆ. ಅದನ್ನು ಮಂಜೂರುಗೊಳಿಸಲು ಎಲ್ಲ ಪ್ರಯತ್ನ ಮಾಡುತ್ತೇನೆ. ಈಗಿನ ಸಮುದ್ರಕೊರೆತ ಪರಿಗಣಿಸಿ 300 ಮೀ. ಉದ್ದಕ್ಕೆ 1.75 ಕೋಟಿ ರೂ. ವೆಚ್ಚದಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಗೆ ಬುಧವಾರ ಪ್ರಸ್ತಾಪ ಕಳುಹಿಸಲಾಗಿದೆ. ಕರಾವಳಿ ನಿವಾಸಿಗರ ಆಸ್ತಿಪಾಸ್ತಿ ರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ತಿಳಿಸಿದ್ರು.

Leave A Reply

Your email address will not be published.