ಬಿಪಿಎಲ್ ಕಾರ್ಡ್ ಹೊಂದಿರುವವರೇ ನಿಮಗೊಂದು ಶಾಕಿಂಗ್ ನ್ಯೂಸ್ | ಪಡಿತರ ವಿತರಣೆಯಲ್ಲಿ ಇನ್ನು ಮುಂದೆ ಇದೆಲ್ಲಾ ಶೀಘ್ರ ಸ್ಥಗಿತ!
ಬಿಪಿಎಲ್ ಪಡಿತರದಾರರಿಗೆ ಇದೊಂದು ಮುಖ್ಯವಾದ ಮಾಹಿತಿಯೆಂದೇ ಹೇಳಬಹುದು. ಏಕೆಂದರೆ ಬಿಪಿಎಲ್ ಪಡಿತರದಾರರಿಗೆ ಅಕ್ಕಿಯ ಜತೆಗೆ ನೀಡುತ್ತಿದ್ದ ಜೋಳ (ಉತ್ತರ ಕರ್ನಾಟಕ ಭಾಗ) ಆಗಸ್ಟ್ ನಂತರ ಸ್ಥಗಿತಗೊಳ್ಳುತ್ತದೆ. ರಾಗಿ(ದಕ್ಷಿಣ ಕರ್ನಾಟಕ ಭಾಗ) ಸೆಪ್ಟೆಂಬರ್ ನಂತರ ಸ್ಥಗಿತಗೊಳ್ಳುತ್ತದೆ. ಆದರೆ ಈ ಹಿಂದೆ ನೀಡುತ್ತಿದ್ದಂತೆ ಅಕ್ಕಿಯ ವಿತರಣೆ ಅದೇ ಪ್ರಮಾಣದಲ್ಲಿ ಅಂದರೆ 10 ಕೆ.ಜಿ. ವಿತರಣೆ ಮುಂದುವರಿಯುತ್ತದೆ.
ರಾಜ್ಯ ಸರಕಾರವು ಕೇಂದ್ರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಮೆಟ್ರಿಕ್ ಟನ್ ರಾಗಿ, 1 ಲಕ್ಷ ಮೆಟ್ರಿಕ್ ಟನ್ ಜೋಳ, 2.60 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಿತ್ತು. ಕೇಂದ್ರದ ಸೂಚನೆಯಂತೆ ಕಳೆದ ಮೂರು ತಿಂಗಳಿಂದ ವಿತರಣೆ ಮಾಡಲಾಗುತ್ತಿದ್ದು, ಈಗ ಸಂಗ್ರಹಣೆ ಮಾಡಿದ್ದ ರಾಗಿ, ಜೋಳ ಖಾಲಿಯಾಗುತ್ತಿವೆ.
ಕೊರೊನಾ ವೇಳೆ ಜನ ಸಂಕಷ್ಟದಲ್ಲಿ ಇದ್ದುದರಿಂದ ಕೇಂದ್ರ ಸರಕಾರ ಕೂಡ ಪಡಿತರದಾರರಿಗೆ ಉಚಿತವಾಗಿ 5 ಕೆ.ಜಿ. ಅಕ್ಕಿ ವಿತರಿಸುತ್ತಿತ್ತು. ಅದನ್ನು 2022ರ ಸೆಪ್ಟೆಂಬರ್ವರೆಗೆ ಮುಂದುವರಿಸಿದೆ. ಇದರ ಜತೆಗೆ ರಾಜ್ಯ ಸರಕಾರದ ವತಿಯಿಂದ ಪಡಿತರದಾರರಿಗೆ ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿತ್ತು. ಅದೇ ರೀತಿ ಜೋಳ, ರಾಗಿ ನಿಲ್ಲಿಸಿದರೂ ಅಕ್ಕಿ ಪ್ರತಿ ಸದಸ್ಯರಿಗೆ 10 ಕೆ.ಜಿ.ಯಂತೆ ಸಿಗಲಿದೆ. ಕೇಂದ್ರದ ಯೋಜನೆ ಸ್ಥಗಿತಗೊಂಡರೆ, ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಸರಕಾರ ಬಿಪಿಎಲ್ ಪಡಿತರದಾರರಿಗೆ ಪ್ರತಿ ಸದಸ್ಯರಿಗೆ ತಲಾ ಒಂದು ಕೆ.ಜಿ. ಅಕ್ಕಿ ವಿತರಣೆ ಮಾಡಲಿದೆ.