ಮಂಗಳೂರು : ಇನ್ನು ಮುಂದೆ ಮನೆಬಾಗಿಲಿಗೆ ಬರುತ್ತೆ ಜನನ ಮರಣ ಪ್ರಮಾಣ ಪತ್ರ!

ಅಂಚೆಇಲಾಖೆಯು ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಜನಮೆಚ್ಚುವಂತಹ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಈ ಯೋಜನೆಯನ್ನು ಮಂಗಳೂರು ಅಂಚೆ ವಿಭಾಗವು ಮಾಡಿದೆ. ಇದಕ್ಕೆ ಸ್ಥಳೀಯ ಜನರ ಸ್ಪಂದನೆ ಕೂಡಾ ಉತ್ತಮವಾಗಿದೆ. ಮುಂದೆ ರಾಜ್ಯಾದ್ಯಂತ ಈ ಸೇವೆ ಲಭ್ಯವಾಗುವ ದಿನಗಳು ಕೂಡಾ ದೂರವಿಲ್ಲ.

 

ಮಂಗಳೂರು ಅಂಚೆ ವಿಭಾಗ ಆರಂಭಿಸಿರುವ ಈ ಸೇವೆ ಏನೆಂದರೆ, ಮನೆ ಬಾಗಿಲಿಗೆ ಜನನ ಹಾಗೂ ಮರಣ ಪ್ರಮಾಣ ಪತ್ರ ತಲುಪಿಸುವುದು. ಹಾಗಾಗಿ ಮಂಗಳೂರು ಅಂಚೆ ವಿಭಾಗ ವ್ಯಾಪ್ತಿಯಲ್ಲಿ ಬರುವ ಯಾವುದೇ ಆಸ್ಪತ್ರೆಯಲ್ಲಿ ಜನಿಸಿದರೂ, ಅದಕ್ಕೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಂದ ಸುಲಭವಾಗಿ ಮನೆ ಬಾಗಿಲಿಗೆ ಜನನ/ ಮರಣ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಪಡೆಯಬಹುದಾಗಿದೆ.

ವಿವಿಧ ಕಾರಣಗಳಿಗಾಗಿ ಒಂದೊಮ್ಮೆ ಮರಣ ಸಂಭವಿಸಿದ್ದಲ್ಲಿ ಅಂತಹವರು ಮರಣ ಪ್ರಮಾಣ ಪತ್ರಕ್ಕಾಗಿ ನಗರದ ಸ್ಥಳೀಯ ಸಂಸ್ಥೆಗಳಿಂದಲೋ ಅಥವಾ ಸರಕಾರಿ ಆಸ್ಪತ್ರೆಯಿಂದಲೋ ಪ್ರಮಾಣ ಪತ್ರಗಳನ್ನು ಪಡೆಯಬೇಕಿತ್ತು. ಆದರೆ ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗ ಇದಕ್ಕಾಗಿ ನಡೆಯುತ್ತಿದ್ದ ಅಲೆದಾಟವನ್ನು ತಪ್ಪಿಸಿದೆ. ಸುಲಭವಾಗಿ ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ವಿಳಾಸಕ್ಕೆ ಜನನ ಇಲ್ಲವೇ ಮರಣ ಪ್ರಮಾಣ ಪತ್ರಗಳನ್ನು ತಲುಪಿಸುತ್ತಿದೆ.

ಜನನ ಅಥವಾ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವವರು ಖಾಸಗಿ ಆಸ್ಪತ್ರೆಗಳಾದರೆ ಸ್ಥಳೀಯ ಸಂಸ್ಥೆಯ ಮೊರೆ ಹೋಗಬೇಕಿತ್ತು. ಸರಕಾರಿ ಆಸ್ಪತ್ರೆಗಳಲ್ಲಾದರೆ ಬಹುತೇಕ ಅಲ್ಲಿಯೇ ಜನನ/ ಮರಣ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಅರ್ಜಿದಾರರು ಸಂಬಂಧಿಸಿದ ಪ್ರಮಾಣ ಪತ್ರಕ್ಕೆ ಅರ್ಜಿ ಭರ್ತಿ ಮಾಡಿ ಕೊಡುವ ವೇಳೆಯೇ ಸ್ಪೀಡ್ ಪೋಸ್ಟ್ ಮೂಲಕ ಪ್ರಮಾಣ ಪತ್ರ ಪಡೆಯುವುದಾಗಿ ಮತ್ತೊಂದು ಕಿರು ಅರ್ಜಿಯನ್ನು ಸಲ್ಲಿಸಬೇಕು. ಹಾಗಿದ್ದಲ್ಲಿ ನಿಗದಿತ ದಿನಗಳಲ್ಲಿ ಅಂಚೆ ಮೂಲಕ ನೀವು ಬಯಸಿದ ಪ್ರಮಾಣ ಪತ್ರ ಪಡೆಯಬಹುದಾಗಿದೆ.

ಹೀಗೆ ಅರ್ಜಿ ತುಂಬಿ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಬಯಸುವವರು ತಮ್ಮ ಪ್ರಮಾಣ ಪತ್ರ ಪಡೆಯುವ ವೇಳೆ ಪೋಸ್ಟ್ ಮ್ಯಾನ್ ಮೂಲಕ ನಿಗದಿಪಡಿಸಿದ ‍ರೂ.100 ಅನ್ನು ನೀಡಿ ಪಡೆಯಬೇಕಾಗುತ್ತದೆ.

ಸಾಮಾನ್ಯವಾಗಿ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಗು ಜನಿಸಿದ್ದಲ್ಲಿ ಜನನ ಪ್ರಮಾಣ ಪತ್ರವನ್ನು ಮಂಗಳೂರು ಮಹಾನಗರ ಪಾಲಿಕೆಯಿಂದ ಪಡೆಯಬೇಕಾಗುತ್ತದೆ. ಹಾಗೆಯೇ ಮಗುವಿನ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಎರಡೆರಡು ಬಾರಿ ಕಚೇರಿಗೆ ತೆರಳ ಬೇಕಾದ ಸಂದರ್ಭ ಇತ್ತು. ಏಕೆಂದರೆ, ಮೊದಲಿಗೆ ಒಮ್ಮೆ ಅರ್ಜಿ ಸಲ್ಲಿಸಿ ಹೋದರೆ, ಮತ್ತೊಮ್ಮೆ ಪ್ರಮಾಣ ಪತ್ರ ಪಡೆಯಲು ಆಗಮಿಸಬೇಕಿತ್ತು. ಅದರಲ್ಲೂ ಸರ್ವರ್ ಸಮಸ್ಯೆಯಾದರೆ ಅದರ ಕಷ್ಟ ಯಾರಿಗೂ ಬೇಡ. ಆದರೆ, ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಶ್ರೀಹರ್ಷ ಅವರು ಈ ಅನಗತ್ಯ ಅಲೆದಾಟವನ್ನು ತಪ್ಪಿಸಿದ್ದಾರೆ.

ಇದೇ ವರ್ಷದ ಮಾರ್ಚ್ 21ರಂದು ಈ ವಿನೂತನ ಸೇವೆಯನ್ನು ಮಂಗಳೂರು ಅಂಚೆ ವಿಭಾಗವು ಆರಂಭಿಸಿದ್ದು ಈಗಾಗಲೇ ಗುಜರಾತ್, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡು ಸೇರಿದಂತೆ 7 ರಾಜ್ಯಗಳ 34 ಜಿಲ್ಲೆಗಳಿಗೆ ಸಂಬಂಧಿಸಿದ 1048 ಜನನ ಮರಣ ಪ್ರಮಾಣ ಪತ್ರಗಳನ್ನು ಕಳುಹಿಸಿಕೊಡುವ ಮೂಲಕ ಮಂಗಳೂರು ಅಂಚೆ ವಿಭಾಗವು ದಾಖಲೆ ಬರೆದಿದೆ. ಜೊತೆಗೆ ಇದೇ ಮಾದರಿಯ ಸೇವೆ ಮುಂದೆ ರಾಜ್ಯಾದ್ಯಂತ ಆರಂಭಿಸುವಂತಾಗಲು ಅಂಚೆ ಇಲಾಖೆ ಮುಂದಾಗಿದ್ದಕ್ಕೂ ಸ್ಪೂರ್ತಿಯಾಗಿದೆ.

ಮಂಗಳೂರು ಅಂಚೆ ವಿಭಾಗವು ಆರಂಭಿಕ ಹಂತದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಜೊತೆ ಒಡಂಬಡಿಕೆ ನಡೆಸಿಕೊಳ್ಳುವ ಮೂಲಕ ಇಂತಹ ವಿನೂತನ ಕಾರ್ಯಕ್ರಮ ಆರಂಭಿಸಿತ್ತು. ಇದೀಗ ಈ ಸೇವೆಯು ಮಂಗಳೂರಿನ ಜಿಲ್ಲಾ ಆಸ್ಪತ್ರೆಗಳಾದ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಲೇಡಿ ಗೋಶನ್ ಸರಕಾರಿ ಆಸ್ಪತ್ರೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾದ ಕೋಟೆಕಾರ್ ಪಟ್ಟಣ ಪಂಚಾಯತ್, ಕಿನ್ನಿಗೋಳಿ ಪಟ್ಟಣ ಪಂಚಾಯತ್, ಬಜ್ಪೆ ಪಟ್ಟಣ ಪಂಚಾಯತ್, ಮುಲ್ಕಿ ಪಟ್ಟಣ ಪಂಚಾಯತ್, ಸೋಮೇಶ್ವರ ನಗರ ಪುರಸಭೆ ಹಾಗೂ ಉಳ್ಳಾಲ ನಗರ ಪುರಸಭೆಗಳಿಗೆ ವಿಸ್ತರಿಸಲಾಗಿದೆ.

ಪ್ರಸ್ತುತ ಈ ಸೇವೆಯನ್ನು ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿರುವ ಪುತ್ತೂರು ನಗರ ಸಭೆ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಹಾಗೂ ಸುಳ್ಯ ಪಟ್ಟಣ ಪಂಚಾಯತ್‌ಗಳಲ್ಲೂ ಆರಂಭಿಸಿರುವುದು ಈ ಸೇವೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಪಡೆಯಲು ಮಂಗಳೂರು ಅಂಚೆ ವಿಭಾಗದ ಕಚೇರಿ ದೂರವಾಣಿ 0824-2218400 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Leave A Reply

Your email address will not be published.