ಕುಂದಾಪುರ | ಕಾರಲ್ಲಿ ಮಲಗಿಸಿ ಜೀವಂತ ದಹನ ಪ್ರಕರಣ ಭೇದಿಸಿದ ಪೊಲೀಸರು!!ಅಮಾಯಕನ ಕೊಲೆಯ ಹಿಂದಿದೆ ಆಕೆಯ ಕೈವಾಡ
ಬೈಂದೂರು: ತನ್ನ ವೈಯಕ್ತಿಕ ವಿಚಾರವಾಗಿ, ತಾನು ಸತ್ತಿದ್ದೇನೆ ಎಂದು ಬಿಂಬಿಸಲು ಇನ್ನೊರ್ವ ಅಮಾಯಕ ವ್ಯಕ್ತಿಯನ್ನು ಜೀವಂತ ಸುಟ್ಟ ಪ್ರಕರಣವೊಂದು ಇದೀಗ ಉಡುಪಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.
ಬೈಂದೂರು ಸಮೀಪದ ವತ್ತಿನೆಣೆ ಎಂಬಲ್ಲಿ ಜುಲೈ 13 ರ ಮುಂಜಾನೆ ಜನನಿಬಿಡ ಪ್ರದೇಶದಲ್ಲಿ ಸುಟ್ಟ ಕಾರೊಂದು ಪತ್ತೆಯಾಗಿತ್ತು. ಕಾರಿನೊಳಗೆ ಸುಟ್ಟ ವ್ಯಕ್ತಿಯ ಶವ ಪತ್ತೆಯಾದ ಘಟನೆಯೊಂದು ಬೆಳಕಿಗೆ ಬಂದ ನಂತರ ಪೊಲೀಸರ ತನಿಖೆ ವೇಗ ಪಡೆದುಕೊಂಡಿತ್ತು. ಈಗ ಘಟನೆಯ ಪೂರ್ತಿ ಸತ್ಯಾಂಶ ಹೊರಬಿದ್ದಿದ್ದು, ಪ್ರಕರಣ ಸಂಬಂಧ ಮಹಿಳೆಯ ಸಹಿತ 4 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30) ಕೊಲೆ ಮಾಡಿ ಸುಟ್ಟವರು. ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49), ನಿತಿನ್ ದೇವಾಡಿಗ (40) ಕೊಲೆ ಆರೋಪಿಗಳಿಬ್ಬರು ಪರಾರಿಯಾಗಲು ಸಹಕರಿಸಿದ್ದು ಸದ್ಯ ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಕಂಪ್ಲೀಟ್ ವಿವರ :
ಅವತ್ತು ಸುಟ್ಟು ಹೋದ ಕಾರಿನ ಚಾಸಿಸ್ ಅನ್ನು ಫೊರೆನ್ಸಿಕ್ ತಜ್ಞರ ಸಹಾಯದಿಂದ ಪರಿಶೀಲಿಸಿ, ಮಾಲಕನ ವಿವರಗಳನ್ನು ಪತ್ತೆಹಚ್ಚಲಾಗಿತ್ತು. ಕಾರಿನ ಮಾಲಕ ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರಿಗಾರ್ (54) ಎಂದು ಗುರುತಿಸಲಾಗಿದ್ದು ಆತನೇ ಕಾರಿನಲ್ಲಿ ಸಿಕ್ಕಿ ಬಿದ್ದು ಸತ್ತು ಹೋಗಿದ್ದಾನೆ ಎಂದು ಮೊದಲಿಗೆ ಭ್ರಮಿಸಲಾಗಿತ್ತು.
ಅಮಾಯಕ ವ್ಯಕ್ತಿಯ ಕೊಲೆ !
ಕಾರ್ಕಳದಲ್ಲಿ ಖಾಸಗಿ ಸರ್ವೇಯರ್ ಆಗಿದ್ದ ಸದಾನಂದ ಶೇರೆಗಾರ್ ಜಾಗ ಹಾಗೂ ಹಣದ ವಿಚಾರದಲ್ಲಿನ ತನ್ನ ಅವ್ಯವಹಾರವನ್ನು ಮುಚ್ಚಿಹಾಕಲು, ತಾನೇ ಸತ್ತು ಹೋಗಿದ್ದೇನೆಂದು ಬಿಂಬಿಸಲು ಹೊರಟಿದ್ದ. ಕೆಲವು ಮೂಲಗಳ ಪ್ರಕಾರ ಆತ ಹಳೆಯ ಕೇಸೊಂದರಲ್ಲಿ ಸಿಲುಕಿದ್ದು, ತನ್ನನ್ನು ತಾನು ಸತ್ತಿದ್ದಾನೆ ಎಂದು ಪ್ರೂವ್ ಮಾಡಿದರೆ, ಎಲ್ಲಾ ಅನಗತ್ಯ ಜಂಜಡದಿಂದ ಮುಕ್ತಿ ಸಿಗುತ್ತದೆ ಎಂಬ ಆಲೋಚನೆಯಿಂದ ಆತ ಖತರ್ನಾಕ್ ಪ್ಲಾನ್ ಒಂದನ್ನು ಮಾಡಿದ್ದ. ಹಾಗೆ ತನ್ನ ಪರವಾಗಿ ಸಾಯಲು ಆತನಿಗೆ ಅರ್ಜೆಂಟ್ ಆಗಿ ಒಂದು ಜೀವ ಬೇಕಾಗಿತ್ತು. ಆಗ ಸಿಕ್ಕಿದ್ದು (ಇದೀಗ ಮೃತ) ಈ ಅಮಾಯಕ ಆನಂದಣ್ಣ, ಅಲಿಯಾಸ್ ಆನಂದ ದೇವಾಡಿಗ !
ಸಾಯುವ ಸಲುವಾಗಿ ಬೇರೊಬ್ಬ ವ್ಯಕ್ತಿಯನ್ನು ತನ್ನ ಕಾರಿನಲ್ಲಿ ಕೂರಿಸಿ, ಅದಕ್ಕೆ ಬೆಂಕಿ ಹಚ್ಚಿ ಕೊಲೆಗೈಯುವ ಪ್ಲಾನ್ ಸೃಷ್ಟಿಸಿದ್ದ ಸದಾನಂದ ಶೇರಿಗಾರ್. ಆಗ ಶೇರಿಗಾರ್ ಗೆ ಸಹಾಯಕ್ಕೆ ಅಂತ ಒಂದು ನಿಂತಿದ್ದು ಈ ಮೂವತ್ತರ ಹರೆಯದ ಶಿಲ್ಪಾ. ಶೇರೆಗಾರ್ ಗೆ ಆಪ್ತವಾಗಿದ್ದ ಶಿಲ್ಪ ಎಂಬ ಮಹಿಳೆ, ಕಾರ್ಕಳದಲ್ಲಿ ಆಕೆಗೆ ಪರಿಚಿತನಾಗಿದ್ದ ಅಮಾಯಕ ಆನಂದ್ ದೇವಾಡಿಗ
ನನ್ನು ಹಾಗೆ ಕಾರಲ್ಲಿ ಕೂರಿಸಿ ಪೆಟ್ರೋಲ್ ಎರಚಿ ಕೊಲ್ಲಲು ಬಕರಾ ಥರ ಗುರುತಿಸಿದ್ದಳು.
ಮೇ.12ರಂದು ಕಾರ್ಕಳದಲ್ಲಿ ತನ್ನ ಮೇಸ್ತ್ರಿ ಕೆಲಸ ಮುಗಿಸಿದ ಆನಂದ ದೇವಾಡಿಗರನ್ನು ಮಂಗಳವಾರ ಮಧ್ಯಾಹ್ನದ ನಂತರ ಕಾರ್ಕಳದ ಬಾರೊಂದಕ್ಕೆ ಕರೆಯಿಸಿ ಕಂಠಪೂರ್ತಿ ಕುಡಿಸಿದ್ದರು. ತಮ್ಮವರ ಒಂದು ದೊಡ್ಡ ಮನೆ ಕೊನೆಯ ಹಂತಕ್ಕೆ ಬಂದು ನಿಂತಿದ್ದು, ಅದಕ್ಕೆ ಮೇಸ್ತ್ರಿ ಎಲ್ಲಾ ಕೆಲಸ ನೀವೇ ಮಾಡಿಕೊಡಬೇಕು ಎಂದು ಅವತ್ತು ಹರಕೆಯ ಕುರಿಗೆ ಅವರು ಹೇಳಿದ್ದರು. ದೇವಾಡಿಗ ಅವರು ಕೂಡಾ ಅದನ್ನು ನಂಬಿದ್ದರು. ಅಂತೆಯೇ ಅವತ್ತು ಆನಂದ ದೇವಾಡಿಗ ಅವರಿಗೆ ಹೋಟೆಲಿನಲ್ಲಿ ಗಮ್ಮತ್ತು ಎಣ್ಣೆ ಮತ್ತು ಊಟ ಕೊಡಿಸಿದ್ದರು.
ಅವತ್ತು ರಾತ್ರಿಯಾಗುತ್ತಿದ್ದಂತೆ ದೇವಾಡಿಗ ಅವರಿಗೆ ಗೊತ್ತಾಗದ ಹಾಗೆ ನಿದ್ದೆ ಮಾತ್ರೆ ಹಾಕಿ ಕುಡಿಸಿದ್ದರು. ಅತ್ತ ಏರಿಸಿದ ಎಣ್ಣೆಯ ಮತ್ತು, ಇತ್ತ ನಿದ್ರೆ ಮಾತ್ರೆಯ ಪ್ರಭಾವ ಎರಡೂ ಸೇರಿಕೊಂಡು ದೇವಾಡಿಗ ಅವರನ್ನು ಕಾರಿನಲ್ಲೇ ಮಲಗಿಸಿ ಬಿಟ್ಟಿತ್ತು.
ಆಗ ಆನಂದ ದೇವಾಡಿಗ ಅವರನ್ನು ಕೂರಿಸಿಕೊಂಡ ಸದಾನಂದ ಶೇರೇಗಾರು ಮತ್ತು ಶಿಲ್ಪ ಇದ್ದ ಕಾರು ನಿರಾತಂಕವಾಗಿ ಬೈಂದೂರಿನ ಕಡೆಗೆ ತಿರುಗಿತ್ತು. ಮಂಗಳವಾರ ರಾತ್ರಿ 12.30ರ ರಾತ್ರಿ ಅಲ್ಲಿನ ಟೋಲ್ ಒಂದರಲ್ಲಿ ದುಡ್ಡು ಪಾವತಿಸಲು ಶಿಲ್ಪಾ ಇಳಿದು ಹಣ ಪಾವತಿ ಮಾಡಿ ಬಂದಿದ್ದಳು.
ನಂತರ ಕಾರು ನಿರ್ಜನ ಪ್ರದೇಶಕ್ಕೆ ತಿರುಗಿ ನಿಂತಿತ್ತು. ಅಲ್ಲಿ ಕಾರಿನಿಂದ ಇಳಿದ ಆರೋಪಿಗಳು ಆನಂದ ಸೇರಿಗಾರ್ ಅವರನ್ನು ಅಲ್ಲಿಯೇ ಬಿಟ್ಟು ಕಾರಿಗೆ ಪೆಟ್ರೋಲ್ ಎರಚಿ ಬೆಂಕಿ ಬಿಸಾಡಿದ್ದರು. ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿಕೊಂಡು ಆನಂದ ದೇವಾಡಿಗ ಅವರು ಜೀವಂತ ದಹನವಾಗಿ ಹೋಗಿದ್ದರು.
ಆನಂತರ ಮುಖ್ಯ ಆರೋಪಿಗಳಾದ ಸದಾನಂದ ಶೇರಿಗಾರ್ ಮತ್ತು ಶಿಲ್ಪ ಬೆಂಗಳೂರಿನ ಬಸ್ ಹತ್ತಿ ಈ ಊರಿನ ಸಹವಾಸವೇ ಬೇಡ ಎಂದು ಬೆಂಗಳೂರು ಮುಖವಾಗಿ ಹೋಗುವವರಿದ್ದರು. ಆದರೆ ದಾರಿ ಮಧ್ಯ ಬಸ್ ಕೆಟ್ಟು ಮತ್ತೆ ಊರಿಗೆ ಬರಬೇಕಾಯಿತು. ಹಾಗೆ ಬರುವಾಗ ಪೊಲೀಸರು ಹಿಡಿದು ಹಾಕಿದ್ದಾರೆ. ತಾನು ಸತ್ತಿದ್ದೇನೆ ಎಂದು ಬಿಂಬಿಸಿಕೊಳ್ಳಬೇಕಾಗಿದ್ದ ಸದಾನಂದ ಶೇರಿಗ ಮತ್ಯಾಕೆ ಊರಿಗೆ ಬಂದ ? ತನ್ನದೇ ಸುತ್ತುಹೋದ ಕಾರ್ ನ ಚೇಸಿಸ್ ನೋಡಿ ಪೊಲೀಸರು ಖಂಡಿತವಾಗಿಯೂ ತನ್ನನ್ನು ತನಿಖೆಗೆ ಒಳಪಡಿಸುತ್ತಾರೆ ಎಂದು ಗೊತ್ತಿದ್ದರೂ ಯಾಕೆ ಆತ ಊರು ಬಿಡುವ ಬದಲು ವಾಪಸ್ ಕಾರ್ಕಳಕ್ಕೆ ಬಂದ ಎನ್ನುವುದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಪೊಲೀಸರ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಿದೆ. ಈಗಾಗಲೇ ಒಟ್ಟು ನಾಲ್ಕು ಜನರನ್ನು ಈ ಕೊಲೆಯ ಸಂಬಂಧ ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ನೇರವಾಗಿ ಕೊಲೆಗೆ ಸಹಾಯ ಮಾಡಿಲ್ಲದಿದ್ದರೂ ಕೊಲೆಯ ನಂತರ ಆರೋಪಿಗಳ ಸಹಾಯಕ್ಕೆ ನಿಂತವರು.
ಒಟ್ಟಾರೆಯಾಗಿ ಕಾರಿಗೆ ಬೆಂಕಿ ಹಚ್ಚಿ ಕಾರ್ಕಳ ಮೂಲದ ಮೇಸ್ತ್ರಿ ಆನಂದ ದೇವಾಡಿಗ (55) ಎಂಬಾತನನ್ನು ಕೊಲೆಗೈದಿದ್ದಾನೆ ಎಂಬುದು ಇಲ್ಲಿಯವರೆಗಿನ ತನಿಖೆಯಲ್ಲಿ ದೃಢಪಟ್ಟಿದೆ. ವಿನಾಕಾರಣ, ತನ್ನ ಪಾಡಿಗೆ ತಾನು ಮೇಸ್ತ್ರಿ ಕೆಲಸ ಮಾಡುತ್ತಾ ದುಡಿದು ತಿನ್ನುತ್ತಿದ್ದ ವ್ಯಕ್ತಿ ಒಬ್ಬನನ್ನು ಅನ್ಯಾಯವಾಗಿ ಅವರಿಬ್ಬರೂ ಕೊಂದು ಮುಗಿಸಿದ್ದಾರೆ.