ಉಪ್ಪಿನಂಗಡಿ : ನದಿ ನೀರಿನ ಹರಿವು ದಿಢೀರ್ ಹೆಚ್ಚಳ ಮತ್ತೆ ಎದುರಾಗಿದೆ ನೆರೆಭೀತಿ
ಉಪ್ಪಿನಂಗಡಿ: ಕುಮಾರಧಾರ-ನೇತ್ರಾವತಿ ನದಿಗಳ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ಜು.13ರ ರಾತ್ರಿ ವೇಳೆ ನದಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದು ಜನ ನೆರೆಭೀತಿಯಲ್ಲಿದ್ದಾರೆ.
ಚಾರ್ಮಾಡಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನದಿ ನೀರಿನ ಮಟ್ಟ ದಿಢೀರ್ ಹೆಚ್ಚಳಗೊಂಡಿದ್ದು ರಾತ್ರಿಯಿಡೀ ಮಳೆ ಸುರಿಯುತ್ತಿರುವುದರಿಂದ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಳಗೊಳ್ಳುವ ಸಾಧ್ಯತೆ ಅಧಿಕವಾಗಿದೆ.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಸ್ನಾನಘಟ್ಟದ ಬಳಿ ನದಿಗೆ ಇಳಿಯುವಲ್ಲಿರುವ 38 ಮೆಟ್ಟಿಲುಗಳ ಪೈಕಿ ಬೆಳಿಗ್ಗೆ 16 ಮೆಟ್ಟಿಲುಗಳು ಕಾಣುತ್ತಿದ್ದರೆ ಸಂಜೆಯಾಗುತ್ತಲೇ ನೀರಿನ ಪ್ರಮಾಣ ಹೆಚ್ಚಳಗೊಂಡು ರಾತ್ರಿ ವೇಳೆ ಕೇವಲ 1 ಮೆಟ್ಟಿಲು ಮಾತ್ರ ಕಾಣುತ್ತಿತ್ತು.
ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಏರಿಕೆಯಾಗುತ್ತಲೇ ಇದೆ.ಶಂಭೂರು ಅಣೆಕಟ್ಟು ಆಧಾರಿತ ಜಲಮಾಪಕದಲ್ಲಿ ನೀರಿನ ಮಟ್ಟ 29 ಮೀ.ಎಂದು ದಾಖಲಾಗಿದೆ. ಇಲ್ಲಿ ಅಪಾಯದ ಮಟ್ಟ 30 ಮೀ.ಆಗಿದೆ.ನೇತ್ರಾವತಿ ನದಿ ಉಗಮ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದುರಿದ ನದಿ ನೀರಿನ ಮಟ್ಟ ಇನ್ನಷ್ಟು ಹೆಚ್ಚಳಗೊಳ್ಳಲಿರುವುದರಿಂದ ಈ ಭಾಗದಲ್ಲಿ ಮತ್ತೆ ನೆರೆಭೀತಿ ಆವರಿಸಿದ್ದು ಜನ ಆತಂಕದಲ್ಲಿದ್ದಾರೆ.