ಗಂಡು ಮಗು ಹುಟ್ಟಲಿ ಎಂದು ಅಪ್ಪನಾದವ ಕಟ್ಟಿಕೊಂಡ ಹರಕೆ ಏನು ಗೊತ್ತೇ, ಬೆಚ್ಚಿಬೀಳಿಸುವಂತಿದೆ ಈತನ ಕೃತ್ಯ

‘ಹೆಣ್ಣು ಮನೆಯ ಕಣ್ಣು’ ಎಂಬ ಮಾತಿದೆ. ಆದರೆ ಇದು ಕೇವಲ ಮಾತಾಗಿಯೇ ಉಳಿದಿದೆ. ಯಾಕಂದ್ರೆ ಇಂದಿಗೂ ಅದೆಷ್ಟೋ ಕುಟುಂಬಗಳಲ್ಲಿ ಹೆಣ್ಣನ್ನು ತಾತ್ಸಾರದಿಂದ ನೋಡೋರೇ ಹೆಚ್ಚು. ಗಂಡು ಮಗು ಹುಟ್ಟಿದಾಗ ‘ಓ ಗಂಡು ಮಗುವಾ’ ಎಂದು ಖುಷಿ ಪಟ್ಟರೆ, ಹೆಣ್ಣೆಂದಾಗ ‘ಛೇ ಹೆಣ್ಣಾ’ ಎಂದು ತಿರಸ್ಕರಿಸುವವರೇ ಹೆಚ್ಚು.

 

ಇದೆಲ್ಲದರ ನಡುವೆ ಗಂಡು ಮಗು ಹುಟ್ಟಲಿ ಎಂದು ಹರಕೆ ಕಟ್ಟಿಕೊಳ್ಳೋರು ಅದೆಷ್ಟೋ ಮಂದಿ. ಸಾಮಾನ್ಯವಾಗಿ ಏನಾದರೂ ದೇವರಿಗೆ ಇಷ್ಟವಾದ ವಸ್ತುಗಳನ್ನು ಹರಕೆ ಕೊಡುವುದಾಗಿ ನೆನೆದುಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ಗಂಡು ಮಗುವಿನ ದುರಾಸೆಗಾಗಿ ಕೊಟ್ಟ ಹರಕೆ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ. ಹೌದು. ತನಗೆ ಗಂಡು ಮಗು ಹುಟ್ಟಿದ್ದಕ್ಕಾಗಿ ಒಬ್ಬ ಅಮಾಯಕ ಬಾಲಕನ ಪ್ರಾಣವನ್ನೇ ತೆಗೆದಿದ್ದಾನೆ ಈ ನೀಚ..

ಮಧ್ಯಪ್ರದೇಶದ ರೇವಾದಲ್ಲಿ ಇಂತಹುದೊಂದು ಆಘಾತಕಾರಿ ಘಟನೆ ನಡೆದಿದೆ. ಗಂಡು ಮಗು ಹುಟ್ಟಿದ ಖುಷಿಗೆ ವ್ಯಕ್ತಿಯೊಬ್ಬ 19 ವರ್ಷದ ಯುವಕನನ್ನೇ ಬಲಿ ನೀಡಿದ್ದಾನೆ. ಈ ಭಯಾನಕ ಕೃತ್ಯವೆಸಗಿದ ವ್ಯಕ್ತಿ ರಾಮ್‌ಲಾಲ್‌ ಎಂಬಾತ.

ರಾಮಲಾಲ್‌ಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದು, ಅವರಿಗೆ ಗಂಡು ಮಗು ಬೇಕಿತ್ತು. ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದರೆ ಯುವಕನನ್ನು ಬಲಿ ಕೊಡುತ್ತೇನೆ ಎಂದು ಆತ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿದ್ದ ಎನ್ನಲಾಗಿದೆ.

ಇದಾದ ನಂತರ ಕಳೆದ ತಿಂಗಳು, ಅವನ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು ಮತ್ತು ಅವನು ತನ್ನ ಪ್ರಾರ್ಥನೆಯಂತೆ ದೇವಿಗೆ ಬಲಿ ನೀಡಲು ಯುವಕನನ್ನು ಹುಡುಕುತ್ತಿದ್ದ. ಜುಲೈ 6 ರಂದು ರಾಮ್‌ಲಾಲ್‌, ಮೇಕೆಗಳನ್ನು ಮೇಯಿಸುತ್ತಿದ್ದ ದಿವ್ಯಾಂಶು ಎಂಬ ಬಾಲಕನನ್ನು ನೋಡಿದ್ದಾನೆ. ನಂತರ ಸಹಾಯ ಮಾಡುವಂತೆ ದಿವ್ಯಾಂಶುವನ್ನು ಕರೆದ ರಾಮ್‌ಲಾಲ್‌ ಆತನನ್ನು ಉಪಾಯವಾಗಿ ಗ್ರಾಮದ ದೇವಿ ದೇವಸ್ಥಾನಕ್ಕೆ ಬರುವಂತೆ ಕೇಳಿಕೊಂಡಿದ್ದಾನೆ. ರಾಮಲಾಲ್ ಮಾತು ನಂಬಿ ಆತನಿಗೆ ಸಹಾಯ ಮಾಡಲು ದೇಗುಲಕ್ಕೆ ತೆರಳಿದ್ದಾನೆ.

ಬಳಿಕ, ದಿವ್ಯಾಂಶುವಿನ ತಲೆ ಕಡಿದು ಆತನ ಶವವನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾನೆ. ಇತ್ತ ದಿವ್ಯಾಂಶು ನಾಪತ್ತೆಯಾದ ಬಗ್ಗೆ ಆತನ ಮನೆಯವರು ದೂರು ನೀಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಜುಲೈ 6 ರಂದು ದೇಗುಲದಲ್ಲಿ ದಿವ್ಯಾಂಶು ಶವ ಪತ್ತೆ ಮಾಡಿದರು. ನಂತರ ತನಿಖೆ ಮಾಡಿದಾಗ ದಿವ್ಯಾಂಶು ಅವರು ಕೊನೆಯದಾಗಿ ರಾಮಲಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಂತರ ಪೊಲೀಸರು ರಾಮ್‌ಲಾಲ್‌ ಅವರನ್ನು ವಿಚಾರಣೆ ನಡೆಸಿದಾಗ, ಅವರು ದಾರಿತಪ್ಪಿಸಲು ಪ್ರಯತ್ನಿಸಿದರು. ಆದರೆ ಕೊನೆಗೆ ತಮ್ಮ ಅಪರಾಧವನ್ನು ಒಪ್ಪಿಕೊಂಡರು. ತನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಮತ್ತು ತನಗೆ ಗಂಡು ಮಗು ಬೇಕೆಂಬ ಆಸೆ ಇತ್ತು. ಗಂಡು ಮಗುವಿಗಾಗಿ ಹಲವು ವಿಧಿವಿಧಾನಗಳನ್ನು ಮಾಡಿದರೂ ಏನೂ ಪ್ರಯೋಜನ ಆಗಲಿಲ್ಲ. ಈ ಮಧ್ಯೆ ಗಂಡು ಮಗುವಿಗಾಗಿ ಯುವಕನೋರ್ವನನ್ನು ಬಲಿಕೊಡಬೇಕು ಎಂದು ಭೂತೋಚ್ಚಾಟಕರೊಬ್ಬರು ಹೇಳಿದ್ದರು ಎಂದು ಆತ ಪೊಲೀಸರು ನಡೆಸಿದ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಕಳೆದ ತಿಂಗಳು ಆತನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಹೀಗಾಗಿ ದೇವಿಗೆ ಬಲಿ ಕೊಡಲು ಆತ ಗಂಡು ಮಗುವನ್ನು ಹುಡುಕುತ್ತಿದ್ದ. ಈತನ ಕಣ್ಣಿಗೆ ದಿವ್ಯಾಂಶು ಕೋಲ್‌ ಕಂಡಿದ್ದು, ಆತನನ್ನು ಬಲಿ ಪಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ರಾಮಲಾಲ್ ಮಾಟಮಂತ್ರವನ್ನು ಕೂಡ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಭೂತೋಚ್ಚಾಟಕನ ಪಾತ್ರವೇನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಈತನ ದುರಾಸೆಗೆ ಬಾಲಕನ ಪ್ರಾಣವನ್ನೇ ತೆಗೆದಿದ್ದಾನೆ.

Leave A Reply

Your email address will not be published.