ಸಾಲದ ಆಪ್ ಹಿಂದೆ ಹೋದಾಕೆ ಸಾವಿನ ಮನೆ ಸೇರಿದಳು!!

ಆನ್ಲೈನಲ್ಲಿ ನಡೆಯುತ್ತಿರುವ ಪ್ರತಿಯೊಂದು ಚಟುವಟಿಕೆಗಳು ಜನರ ಜೀವ ಹಿಂಡುತ್ತಿದೆ. ಕೆಲವೊಂದು ಆಪ್ ಗಳಿಂದ ಉಪಯೋಗವಾದರೆ, ಇನ್ನು ಕೆಲವರು ಇದನ್ನೇ ಬಂಡವಾಳವಾಗಿಸಿಕೊಂಡು ಅದೆಷ್ಟೋ ಜನರನ್ನು ಮೋಸದ ವಂಚನೆಗೆ ಗುರಿಯಾಗಿಸುತ್ತಿದ್ದಾರೆ. ಇದರಲ್ಲಿ ಆನ್ಲೈನ್ ಲೋನ್ ಆಪ್ ಕೂಡ ಒಂದು.

 

ಇತ್ತೀಚಿನ ದಿನಗಳಲ್ಲಿ ಲೋನ್ ಆಪ್ ಬಳಸುವವರ ಸಂಖ್ಯೆ ಅತಿಯಾಗಿದ್ದು, ಇದನ್ನೇ ಗುರಿಯಾಗಿಸಿಕೊಂಡ ಕೆಲವು ವಂಚಕರು ಅಮಾಯಕರಿಂದ ಹಣ ವಂಚಿಸುತ್ತಿರುವಂತಹ ಘಟನೆ ನಡೆದಿದೆ. ಇದರಿಂದ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವವರ ಸಂಖ್ಯೆಯು ಅತಿಯಾಗಿದೆ. ಇದೀಗ ಅಂತಹುದೇ ಒಂದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಸಾಲದ ಆಪ್​ ಆಪರೇಟರ್​ಗಳ ಕಿರುಕುಳವನ್ನು ಸಹಿಸಲಾರದೇ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿ ಮಂಡಲದ ಚಿನ್ನಕಾಕನಿ ಗ್ರಾಮದ ನಿವಾಸಿ ವಿವಾಹಿತೆ ಪ್ರತ್ಯುಷಾ ಸಾವಿನ ಹಾದಿ ಹಿಡಿದಿರುವ ಘಟನೆ ನಡೆದಿದೆ.

ಏನಿದು ಘಟನೆ :
ಪ್ರತ್ಯುಷಾ ಎಂಬುವವರು ಇಂಡಿಯನ್​ ಬುಲ್ಸ್​ ಮತ್ತು ರುಪೆಕ್ಸ್​ ಸಾಲದ ಆಪ್​ನಲ್ಲಿ 20 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದರು. ಇದಕ್ಕೆ ಅತ್ಯಧಿಕ ಬಡ್ಡಿದರ ವಿಧಿಸಿದ್ದ ಆಪರೇಟರ್​ಗಳು ಪ್ರತ್ಯುಷಾರಿಂದ 2 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದರು. ಇಷ್ಟಾದರೂ ಸುಮ್ಮನಾಗದ ಆಪ್​ ಏಜೆಂಟ್​ಗಳು, ಪ್ರತ್ಯುಷಾ ಇನ್ನೂ ಸಾಲ ತೀರಿಸಿಲ್ಲ ಅಂತಾ ತಮ್ಮ ಸಾಮಾನ್ಯ ವಿಧಾನದಲ್ಲಿ ಸೈಬರ್​ ಕ್ರಿಮಿನಲ್​ ಚಟುವಟಿಕೆ ಮೂಲಕ ಆಕೆಯನ್ನು ಹೆದರಿಸಲು ಆರಂಭಿಸಿದ್ದರು.

ಅಷ್ಟೇ ಅಲ್ಲದೆ, ಸಾಲ ಮರು ಪಾವತಿ ಮಾಡದಿದ್ದರೆ, ಸಂಬಂಧಿಕರಿಗೆ ಸಾಲದ ಮಾಹಿತಿ ನೀಡಲಾಗುವುದು ಎಂದು ಹೆದರಿಸಿದರು. ಅಲ್ಲದೆ, ವಾಟ್ಸ್​ಆಪ್​ ಮೂಲಕ ಅಶ್ಲೀಲ ಸಂದೇಶ ರವಾನಿಸಿ, ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಸಿದರು.

ಆಪ್​ ಏಜೆಂಟರ್​ ನಿರಂತರ ಕಿರುಕುಳವನ್ನು ಸಹಿಸದ ಪ್ರತ್ಯುಷಾ ಸೋಮವಾರ ತಮ್ಮ ಮನೆಯ ಮೇಲಿರುವ ಫ್ಲೆಕ್ಸ್​ ಹೋರ್ಡಿಂಗ್​ ಫ್ರೇಮ್​ಗೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಪಾಲಕರಿಗೆ ಮತ್ತು ಪತಿಗೆ ಸೆಲ್ಫಿ ವಿಡಿಯೋ ಮಾಡಿರುವ ಪ್ರತ್ಯುಷಾ ನಡೆದ ಎಲ್ಲ ಘಟನೆಯನ್ನು ವಿವರಿಸಿ, ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.

ವಿಡಿಯೋ ನೋಡಿದ ಪ್ರತ್ಯುಷಾ ಪತಿ, ಮಂಗಳಗಿರಿ ಪೊಲೀಸ್​ ಠಾಣೆಗೆ ತೆರಳಿ ಸಾಲದ ಆಪ್​ ಮತ್ತು ಏಜೆಂಟ್​ಗಳ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆ ಅಡಿಯಲ್ಲಿರುವ ಸೂಕ್ತ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.