ಪುಣಚದ ತೋಡಿನಲ್ಲಿ ವ್ಯಕ್ತಿಯ ಶವ ಪತ್ತೆ | ಬೈತಡ್ಕದಲ್ಲಿ ನಾಪತ್ತೆಯಾದ ಯುವಕರಿಗೂ ಇದಕ್ಕೂ ಸಂಬಂಧದ ಊಹಾಪೋಹ

ವಿಟ್ಲ: ತೋಡಿನಲ್ಲಿ ಶವವೊಂದು ಪತ್ತೆಯಾದ ಘಟನೆ ಪುಣಚ ಗ್ರಾಮದ ದಂಬೆ ಎಂಬಲ್ಲಿ ನಡೆದಿದೆ.

ತೋಡಿನಲ್ಲಿ ಶವದ ಕಾಲು ಮತ್ತು ಕೈ ಮಾತ್ರ ಕಾಣುತ್ತಿದ್ದು, ಗುರುತು ಪತ್ತೆಯಾಗಿಲ್ಲ. ಸ್ಥಳೀಯರು ತೋಡಿನಲ್ಲಿ ಶವವಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೇಪು ಗ್ರಾಮದ ಕುಕ್ಕೆಬೆಟ್ಟು ನಿವಾಸಿ ಬಾಬುನಾಯ್ಕರ ಮಗ ಕುಶಾಲಕ್ಷ ನಿನ್ನೆ ಬೆಳಗ್ಗೆ 11ಕ್ಕೆ ಮನೆಯಿಂದ ತೆರಳಿ ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಲ್ಲದೆ ಬೈತಡ್ಕ ಹೊಳೆಯಲ್ಲಿ ಕಾರು ಬಿದ್ದು ಯುವಕರು ನಾಪತ್ತೆ ಪ್ರಕರಣಕ್ಕೂ ಇದಕ್ಕೂ ಸಂಬಂಧವಿದೆಯಾ ಎಂಬುವುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

ಈ ಬಗ್ಗೆ ಸಂಶಯ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಘಟನೆ ವಿವರ ;

ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಗೌರಿ ಹೊಳೆಗೆ ಮಂಜೇಶ್ವರ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲಾದ ಬೈತಡ್ಕ ಮಸೀದಿಯ ಬಳಿಯಿರುವ ಕಿರುಸೇತುವೆಯಿಂದ ಕಾರೊಂದು ಕೆಳಗೆ ಬಿದ್ದು ಯುವಕರಿಬ್ಬರು ನಾಪತ್ತೆಯಾದ ಘಟನೆ ಶನಿವಾರ ತಡರಾತ್ರಿ ನಡೆದಿತ್ತು.
ನಾಪತ್ತೆಯಾಗಿರುವ ಯುವಕರನ್ನು ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್ (25) ಹಾಗೂ ವಿಟ್ಲ ಕನ್ಯಾನ ನಿವಾಸಿ ಧನುಷ್ (21) ಎಂದು ಗುರುತಿಸಲಾಗಿದೆ.
ಮಾರುತಿ ೮೦೦ ಕಾರನ್ನು ರಾತ್ರಿ ಸವಣೂರು ದಾಟಿ ಬೈತಡ್ಕಕ್ಕೆ ಆಗಮಿಸಿದಾಗ ಸುಮಾರು ರಾತ್ರಿ ಗಂಟೆ ೧೨.೦೨ ರ ವೇಳೆಗೆ ಸೇತುವೆಗ ಡಿಕ್ಕಿ ಹೊಡೆದು ಕಾರು ಕೆಳಗೆ ಬಿದ್ದಿದೆ. ಯುವಕರು ಒಬ್ಬರಿಗೊಬ್ಬರು ಸಂಬಂಧಿಕರಾಗಿದ್ದು , ಇಬ್ಬರೂ ಟಿಂಬರ್ ವ್ಯವಹಾರದವರೊಟ್ಟಿಗೆ ಕೆಲಸ ಮಾಡುವವರಾಗಿದ್ದಾರೆ. ರಾತ್ರಿ ಹೊತ್ತು, ವ್ಯವಹಾರ ನಿಮಿತ್ತ ಕಾರಿನಲ್ಲಿ ಎಲ್ಲೋ ಹೊರಟಿದ್ದರು ಎನ್ನಲಾಗಿದೆ. ಇವರ ಸಂಬಂಧಿಕರ ಮನೆ ಸುಳ್ಯದ ಗುತ್ತಿಗಾರಿಗೆ ಹೋಗುವವರಿದ್ದರೂ ಎಂದು ಅಂದಾಜಿಸಲಾಗಿದ್ದರೂ ಅದ್ಯಾವುದೂ ಸ್ಪಷ್ಟವಾಗಿಲ್ಲ. ಸವಣೂರಿನಲ್ಲಿ ಪೋಲೀಸ್ ಚೆಕ್ ಪೋಸ್ಟ್‌ನಲ್ಲಿ ರಾತ್ರಿ ೧೧.೫೩ ತಪಾಸನೆ ಒಳಪಟ್ಟು ಮುಂದೆ ಸಾಗಿ ೧೨ಗಂಟೆ ೨ ನಿಮಿಷಕ್ಕೆ ಕಾರು ಸೇತುವೆಗೆ ಡಿಕ್ಕಿಯಾಗಿ ತಡೆಗೋಡೆ ಮುರಿದು ಕೆಳಕ್ಕೆ ಬಿದ್ದಿದೆ. ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಪೋಲೀಸ್ ಕಂದಾಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ತಪಾಸನೆ ನಡೆಸಿದ್ದಾರೆ. ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯ ಹುಡುಕಾಟ ನಡೆಸಿದಾಗ ಕಾರು ಸೇತುವೆಯ ಕೆಳಭಾಗದಲ್ಲಿ ಪತ್ತೆಯಾಯಿತು.
ಅದನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಹಿಡಿತ ತಪ್ಪಿ ಮತ್ತಷ್ಟು ಕೆಳಕ್ಕೆ ಹೋಯಿತು. ಬಳಿಕ ಸುಳ್ಯದ ಇಬ್ಬರು ಈಜು ತಜ್ಞರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಕಾರನ್ನು ಮೇಲಕ್ಕೆ ಎತ್ತಿದ್ದಾರೆ. ಈ ಪ್ರಕ್ರಿಯೆ ಮಧ್ಯಾಹ್ನದ ವೇಳಗೆ ಮುಗಿದೆ. ಆದರೆ ಕಾರಲ್ಲಿ ಇದ್ದವರು ಪತ್ತೆಯಾಗಿರಲಿಲ್ಲ.
ಈ ಮಧ್ಯೆ ನಾಪತ್ತೆಯಾಗಿರುವ ಪೈಕಿ ವಿಟ್ಲ ಕನ್ಯಾನ ನಿವಾಸಿ ಧನುಷ್ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಧನುಷ್ ಅವರ ತಾಯಿಗೆ ಕರೆ ಮಾಡಿ ನಮ್ಮ ಕಾರು ಹಳೆಯಂಗಡಿಯಲ್ಲಿ ಲಾರಿಗೆ ಡಿಕ್ಕಿಯಾಗಿದೆ, ನಾವು ಬದುಕಿ ಉಳಿದಿರುವುದೇ ಹೆಚ್ಚು, ಏನೂ ತೊಂದರೆಯಿಲ್ಲ, ನಾವು ಮನೆಗೆ ಮುಟ್ಟುವಾಗ ಬೆಳಿಗ್ಗೆ ಆಗಬಹುದು ಎಂದು ಹೇಳಿದ್ದಾನೆ. ಆತ ಯಾಕೆ ಈ ರೀತಿ ಸುಳ್ಳು ಹೇಳಿದ್ದಾನೆ ಎನ್ನುವ ವಿಚಾರ ಕೆಲವು ಸಂಶಯಗಳನ್ನು ಹುಟ್ಟು ಹಾಕಿದೆ. ಬಳಿಕ ಪೋಲೀಸರು ತೀವೃ ತನಿಖೆ ನಡೆಸಿದಾಗ ಆತ ಧನುಷ್ ತಾಯಿಗೆ ಕರೆ ಮಾಡಿರುವುದು ೧೧.೫೨ ಕ್ಕೆ ಎಂದು ಸ್ಪಷ್ಟವಾಗಿ ತಿಳಿದು ಬಂದಿದೆ. ಕಾರು ಹೊಳಗೆ ಬೀಳುವ ಮುಂಚೆ ಕರೆ ಮಾಡಲಾಗಿದೆ ಎಂದು ನಿರ್ಧಾರಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಯುವಕರು ಕಾರಿನೊಂದಿಗೆ ಹೊಳೆಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದ್ದು. ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಲಾಟಿ ಚಾಜ್:
ಕಾರು ಹೊಳೆಗೆ ಬಿದ್ದಿರುವುದು ತಿಳಿಯುತ್ತಿದ್ದಂತೆ ಜನ ಸಾಗರೋಪಾದಿಯಲ್ಲಿ ಬಂದು ಹೊಳೆ ಬದಿಯಲ್ಲಿ ಹಾಗೂ ಸೇತುವೆಯಲ್ಲಿ ಜಮಾಯಿಸಿದರು. ಈ ಮಧ್ಯೆ ಒಬ್ಬ ವ್ಯಕ್ತಿ ಹೊಳಗೆ ಹಾರಿ ಈಜಾಡಿ ಮೇಲೆ ಬಂದಿದ್ದಾನೆ. ಈ ಎಲ್ಲಾ ಬೆಳವಣಿಗೆಯನ್ನು ಕಂಡ ಪೋಲೀಸರು ಜನರನ್ನು ನಿಯಂತ್ರಿಸಲು ಎಷ್ಟೇ ಪ್ರಯತ್ನ ಪಟ್ಟರೂ ಮಾತು ಕೇಳದೇ ಹೋದಾಗ ಸೇರಿದ ಜನಕ್ಕೆ ಬೆಳ್ಳಾರೆ ಎಸ್.ಐ ರುಕ್ಮ ನಾಯ್ಕ್ ಲಾಟಿ ರುಚಿ ತೋರಿಸಿ ಜನರನ್ನು ದೂರ ಅಟ್ಟಿದರು.

ಪ್ರಕರಣಕ್ಕೆ ಸಾಕ್ಷಿಯಾದ ಸಿಸಿ ಕ್ಯಾಮಾರ
ಕಾರು ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದಿರುವ ಪ್ರಕರಣಕ್ಕೆ ಮಸೀದಿಯಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಸಾಕ್ಷಿಯಾಯಿತು. ಭಾನುವಾರ ಬಕ್ರೀದ್ ಹಬ್ಬವಾಗಿದ್ದರಿಂದ ಮುಸ್ಲಿಮ್ ಬಾಂಧವರು ಮುಂಜಾವಿನ ೪.೩೦ g ವೇಳೆಗೆ ಮಸೀದಿಗೆ ಆಗಮಿಸುವಾಗ ಸೇತುವೆಯ ತಡೆಗೋಡೆ ಮುರಿದು ಹೋಗಿರುವುದು ಗೋಚರಿಸಿತು. ಬಳಿಕ ಮಸೀದಿಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿರುವುದು ಬೆಳಕಿಗೆ ಬಂದಿತು. ತಕ್ಷಣ ಮಸೀದಿಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನದ ವೇಳಗೆ ಕಾರು ಹೊಳೆಗೆ ಬಿದ್ದಿರುವ ಬಗ್ಗೆ ಅಂತೆ ಕಂತೆಗಳ ಸುದ್ದಿ ಎಲ್ಲೆಲ್ಲೋ ಹರಿದಾಡುತ್ತಿತ್ತು. ಕಾರು ಹೇಗೆ ಬಿದ್ದಿದೆ ಹಾಗೂ ಎಷ್ಟು ಹೊತ್ತಿಗೆ ಬಿದ್ದಿಗೆ ಎನ್ನುವ ವಿಚಾರ ಷ್ಪಷ್ಟಪಡಿಸಲು ಮತ್ತೆ ಸಿಸಿ ಕ್ಯಾಮರಾ ಮೊರೆ ಹೋಗಿ ನಾಪತ್ತೆಯಾಗಿರುವ ಇಬ್ಬರು ಧನುಷ್‌ಗಳ ಪೈಕಿ ಒಬ್ಬ ಧನುಷ್ ಕಾರು ಹೊಳೆಗೆ ಬೀಳುವ ಉಂಚೆಯೇ ಕರೆ ಮಾಡಿರುವುದನ್ನು ಖಚಿತಪಡಿಸಿಕೊಂಡರು.

ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷಕ ಕುಮಾರ್‌ಚಂದ್ರ , ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಪುತ್ತೂರು ಎಎಸ್‌ಪಿ ಡಾ| ಗಾನಾ ಪಿ.ಕುಮಾರ್, ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ನವೀನ್‌ಚಂದ್ರ ಜೋಗಿ, ಕಡಬ ತಹಶಿಲ್ದಾರ್ ಅನಂತಶಂಕರ್, ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ, ಬೆಳ್ಳಾರೆ ಠಾಣಾಧಿಕಾರಿ ರುಕ್ಮ ನಾಯ್ಕ್, ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave A Reply

Your email address will not be published.