ಆಫ್ ಆದದ್ದು ಜನರೇಟರ್, ನಿಂತು ಹೋದದ್ದು ಮದುವೆ
ಮದುವೆಯೆಂದರೆ ಅಲ್ಲಿ ಅಡೆತಡೆಗಳು ಇದ್ದೇ ಇರುತ್ತದೆ. ಕೆಲವೊಂದು ಕುಟುಂಬಗಳು ಇದನ್ನು ಸರಿಪಡಿಸಿಕೊಂಡು ಮದುವೆಯನ್ನು ಮುಗಿಸಿಕೊಂಡರೆ, ಇನ್ನೂ ಕೆಲವು ಕುಟುಂಬಗಳು ಇದನ್ನೇ ದೊಡ್ಡ ವಿಷಯವಾಗಿಸಿಕೊಂಡು ಮದುವೆಯನ್ನು ನಿಲ್ಲಿಸುವಂತಹ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿದೆ.
ವರ ಚೆನ್ನಾಗಿಲ್ಲ, ವಯಸ್ಸಾಗಿದೆ ಇಂತಹ ಅದೆಷ್ಟೋ ಕಾರಣಗಳಿಗೆ ಮದುವೆ ಮುರಿದು ಹೋಗಿರುವ ಘಟನೆಗಳ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ಇಲ್ಲೊಂದು ಕಡೆ ವಿಚಿತ್ರ ಕಾರಣಕ್ಕೆ ಮದುವೆಯೇ ನಿಂತು ಹೋಗಿದೆ. ಹೌದು. ಇಲ್ಲಿ ಆಫ್ ಆಗಿದ್ದು ಜನರೇಟರ್ ನಿಂತಿದ್ದು ಮಾತ್ರ ಮದುವೆ!!.. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದನ್ನು ಮುಂದೆ ಓದಿ..
ಹೌದು. ಇಂತಹುದೊಂದು ಘಟನೆ ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ನಡೆದಿದೆ. ಶಹಜಹಾನ್ಪುರ ಜಿಲ್ಲೆಯ ಥಾನಾ ಕಾಂತ್ ಪ್ರದೇಶದ ಜೋರವಾನ್ ಗ್ರಾಮದ ನಿವಾಸಿ ರವೀಂದ್ರ ಪಾಲ್ ಎನ್ನುವವರ ಪುತ್ರನ ವಿವಾಹವು, ಬಿಲ್ಸಂದಾ ಪ್ರದೇಶದ ಮುದಿಯಾ ಬಿಲ್ಹಾರ ಗ್ರಾಮದ ನಿವಾಸಿ ಮೋಹನ್ ಲಾಲ್ ಎಂಬವರ ಪುತ್ರಿ ಸ್ವಾತಿಯೊಂದಿಗೆ ನಡೆಯುತ್ತಿತ್ತು.ರಾತ್ರಿ ನಡೆದ ವಿವಾಹದ ಸಂದರ್ಭದಲ್ಲಿ ಜನರೇಟರ್ ಆಫ್ ಆಗಿದೆ. ಈ ಸಣ್ಣ ವಿಚಾರಕ್ಕೆ ಹೆಣ್ಣು ಮತ್ತು ಗಂಡಿನ ಕಡೆಯವರ ನಡುವೆ ಮಾತಿಗೆ ಮಾತು ಬೆಳೆದಿದೆ. ನಂತರ ನೋಡ ನೋಡುತ್ತಿದ್ದಂತೆ ಕೈಗೆ ಸಿಕ್ಕಿದ ವಸ್ತುಗಳನ್ನು ಎತ್ತಿಕೊಂಡು ಹೊಡೆದಾಡಿಕೊಂಡಿದ್ದಾರೆ.
ಈ ಗಲಾಟೆಯಲ್ಲಿ ವರನ ಕಡೆಯ ಹಲವರು ಗಾಯಗೊಂಡಿದ್ದಾರೆ. ಒಬ್ಬ ಯುವಕನ ತಲೆಗೆ ಗಂಭೀರವಾಗಿ ಗಾಯವಾಗಿದೆ. ಇಷ್ಟೆಲ್ಲಾ ಘಟನೆ ನಡೆದ ನಂತರ ಹುಡುಗಿ ಮದುವೆಯಾಗಲು ನಿರಾಕರಿಸಿದ್ದಾಳೆ. ನಂತರ ಹಸೆಮಣೆ ಏರಬೇಕಾಗಿದ್ದ ವಧು-ವರರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಒಟ್ಟಾರೆ ಒಂದು ಜನರೇಟರ್ ಮದುವೆಯನ್ನೇ ಮುರಿದು ಹಾಕಿದೆ..