‘ತಮ್ಮ ಬೆಂಬಲಿಗನ ಕಾರನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದೆಂದು’ ಪತ್ರ ಬರೆದು ತಾಕೀತು ಮಾಡಿದ ಬಿಜೆಪಿ ಶಾಸಕ
ಅದೆಷ್ಟೋ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಸಹಾಯ ಎಂದು ಬಂದ ಜನರನ್ನು ಹಿಂದಿಕ್ಕಿ, ಕೆಟ್ಟ ಕೆಲಸಗಳಿಗೆ ನೆರವು ಕೇಳುವ ತಮ್ಮ ಜನರಿಗೆ ಬಹುಬೇಗನೆ ಸಹಾಯ ಮಾಡುತ್ತಾರೆ.
ಸಾಮಾನ್ಯವಾಗಿ ನಾವು ನೋಡಿದ ರೀತಿಯಲ್ಲಿ, ಕೆಲಸ ತೆಗೆಸಿಕೊಡಲು, ಶಾಲೆಗಳಲ್ಲಿ ಸೀಟ್ ಸಿಗಲು, ಆಸ್ಪತ್ರೆಗಳಲ್ಲಿ ಬೆಡ್ ಗಾಗಿ, ಚಿಕಿತ್ಸಾ ವೆಚ್ಚ ಕಡಿಮೆ ಮಾಡಿಸಿಕೊಳ್ಳಲು ಹೀಗೆ ಅನೇಕ ಕಾರಣಗಳಿಗೆ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತಾರೆ. ಇದು ಕಾಮನ್ ಕೂಡ. ಆದರೆ, ಇಲ್ಲೊಬ್ಬ ಶಾಸಕರು ತನ್ನ ಬೆಂಬಲಿಗನಿಗೆ ಯಾವ ರೀತಿಲಿ ಸಹಾಯ ಮಾಡಿದರೆಂದು ನೀವೇ ನೋಡಿ.
ಹೌದು. ಗದಗ ಜಿಲ್ಲೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮಪ್ಪ ಎಸ್. ಲಮಾಣಿ ಎಂಬುವವರು, ತಮ್ಮ ಬೆಂಬಲಿಗನ ಕಾರನ್ನು ಯಾವುದೇ ಕಾರಣಕ್ಕೂ ತಪಾಸಣೆ ಮಾಡುವ ನೆಪದಲ್ಲಿ ನಿಲ್ಲಿಸಬಾರದು ಎಂದು ಪತ್ರ ಬರೆದು ತಾಕೀತು ಮಾಡಿದ್ದಾರೆ.
“ಶಿರಹಟ್ಟಿ ತಾಲೂಕಿನ ಬೆಳಗಟ್ಟಿಯ ಜಿ.ಬಸವರಾಜ ಎಂಬುವವರು ನನ್ನ ಮತ ಕ್ಷೇತ್ರಕ್ಕೆ ಒಳಪಟ್ಟಿದ್ದು, ನಮ್ಮ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಹಾಗೂ ನನಗೆ ತುಂಬಾ ಚಿರಪರಿಚಿತರು. ಬಸವರಾಜ ಅವರು ಮಹೇಂದ್ರ ಬೊಲೆರೋ ವಾಹನ ಹೊಂದಿದ್ದು, ಇದರ ಸಂಖ್ಯೆ AP-39 V-3517. ಈ ವಾಹನವನ್ನು ಹಿಡಿಯಬಾರದು. ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು” ಎಂದು ಪತ್ರದ ಮೂಲಕ ಮನವಿ ಮಾಡುತ್ತೇನೆ ಎಂದು ಶಾಸಕರ ಲೆಟರ್‌ಹೆಡ್‌ನಲ್ಲೇ ರಾಮಪ್ಪ ಎಸ್. ಲಮಾಣಿ ಅವರು ಬರೆದು ಸಹಿ ಮಾಡಿದ್ದಾರೆ.
ಇದೀಗ ಈ ಶಾಸಕರ ಪತ್ರ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಅಧಿಕಾರದ ದುರ್ಬಳಕೆ, ‘ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ಶಾಸಕರ ಕಡೆಯವರು ಅಂದ ಮಾತ್ರಕ್ಕೆ ಸಾರಿಗೆ ನಿಯಮ ಅನ್ವಯಿಸುವುದಿಲ್ಲವೇ? ಇದ್ದೇನು ಸರ್ವಾಧಿಕಾರಿ ಧೋರಣೆಯೇ’ಎಂದು ಪ್ರಶ್ನಿಸುತ್ತಿದ್ದಾರೆ.