ಲೈಂಗಿಕ ಸಂಬಂಧ ಮದುವೆಯಲ್ಲಿ ಅಂತ್ಯವಾಗದ ಮಾತ್ರಕ್ಕೆ ಅತ್ಯಾಚಾರವಾಗುವುದಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

ಪರಸ್ಪರ ಸಮ್ಮತಿಯೊಂದಿಗೆ ನಡೆದ ಲೈಂಗಿಕ ಸಂಬಂಧ ನಂತರ ಮುಂದುವರಿದು ಮದುವೆಯಲ್ಲಿ ಕೊನೆಗೊಳ್ಳಲಿಲ್ಲ ಎಂಬ ಕಾರಣಕ್ಕೆ ಅದು ಅತ್ಯಾಚಾರವೆಂದು (ಐಪಿಸಿ ಸೆಕ್ಷನ್ 376 ಅಡಿಯಲ್ಲಿ) ಸಾಬೀತು ಮಾಡಲು ಆಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

 

ಮೋಸದಿಂದ ಅಥವಾ ದಿಕ್ಕುತಪ್ಪಿಸಿ ಲೈಂಗಿಕ ಕ್ರಿಯೆ ನಡೆಸದ ಹೊರತು ಇಬ್ಬರು ವಯಸ್ಕರ ನಡುವಿನ ಲೈಂಗಿಕ ಸಂಬಂಧ ಐಪಿಸಿ ಸೆಕ್ಷನ್ 376ರ ಅಡಿ ಅತ್ಯಾಚಾರಕ್ಕೆ ಸಮನಾಗಿರುವುದಿಲ್ಲ. ಇಬ್ಬರ ಲೈಂಗಿಕ ಸಂಬಂಧಕ್ಕೆ ಮದುವೆಯ ಅಂಕಿತ ಬೀಳದಿದ್ದರೂ ಲೈಂಗಿಕ ಸಮ್ಮತಿಗೆ ಧಕ್ಕೆ ತರುವ ಯಾವುದೇ ಅಂಶ ಇರದಿದ್ದಾಗ ಅದು ಅತ್ಯಾಚಾರ ಆಗುವುದಿಲ್ಲ. ಇಬ್ಬರು ಶಾರೀರಿಕ ಸಂಬಂಧದಲ್ಲಿ ತೊಡಗಿದ್ದರೂ ನಂತರ ಮದುವೆಗೆ ಒಪ್ಪದಿದ್ದರೆ ಅಥವಾ ಸಂಬಂಧ ಮುಂದುವರಿಸುವುದು ವಿಫಲವಾದರೆ ಆ ಅಂಶಗಳು ಅತ್ಯಾಚಾರ ಆರೋಪ ನಿಗದಿಗೆ ಒಪ್ಪುವಂತಹದ್ದಾಗಿರುವುದಿಲ್ಲ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಪೀಠ ಹೇಳಿದೆ.

“ಅತ್ಯಾಚಾರವಾಗಿದೆ” ಎಂಬುದನ್ನು ಸಾಬೀತು ಮಾಡಬೇಕಾದರೆ ಮದುವೆಯಾಗುವ ಭರವಸೆಯನ್ನು ಉದ್ದೇಶಪೂರ್ವಕವಾಗಿ ಸುಳ್ಳಾಗಿಸಿರಬೇಕು ಮತ್ತು ಅಂತಹ (ಸುಳ್ಳು) ಭರವಸೆಗೆ ಮಹಿಳೆ ಒಪ್ಪಿಗೆ ಸೂಚಿಸಿರಬೇಕು ಎಂದು ಪೀಠ ಪ್ರತಿಪಾದಿಸಿದೆ.

ಮದುವೆಯಾಗುವ ಭರವಸೆ ಪಾಲಿಸಲು ವಿಫಲರಾದ ಕಾರಣಕ್ಕಾಗಿ ಪುರುಷ ಮತ್ತು ಮಹಿಳೆಯ ನಡುವಿನ ದೈಹಿಕ ಸಂಬಂಧವನ್ನು ಅತ್ಯಾಚಾರವಾಗಿ ಪರಿವರ್ತಿಸಬೇಕಾದರೆ ಪುರುಷನ ಭರವಸೆ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮಹಿಳೆ ನಿರ್ಧರಿಸಿರಬೇಕು. ಮದುವೆ ಕುರಿತ ಸುಳ್ಳು ಭರವಸೆಯನ್ನು ಸಾಬೀತುಪಡಿಸಲು ಭರವಸೆ ನೀಡಿದವನಿಗೆ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ತನ್ನ ಮಾತನ್ನು ಎತ್ತಿ ಹಿಡಿಯುವ ಉದ್ದೇಶ ಇರಬಾರದು. ಶಾರೀರಿಕ ಮಿಲನ ಮತ್ತು ಮದುವೆಯ ಭರವಸೆಯ ನಡುವೆ ನೇರ ಸಂಬಂಧ ಇರಬೇಕು ಆದೇಶಿಸಲಾಗಿದೆ.

ತನ್ನ ಸಹೋದ್ಯೋಗಿ ಹಾಗೂ ವಕೀಲೆಯೊಬ್ಬರು ನೀಡಿದ್ದ ಲೈಂಗಿಕ ದೌರ್ಜನ್ಯದ ದೂರಿನಡಿ ಬಂಧಿತರಾಗಿರುವ ಕೇಂದ್ರ ಸರ್ಕಾರದ ವಕೀಲ ಕೇರಳದ ನವನೀತ್ ಎನ್.ನಾಥ್ ಅವರ ಪ್ರಕರಣದ ಕುರಿತು ವಿಚಾರಣೆ ನಡೆಯಿತು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಕೆಲ ಷರತ್ತುಗಳನ್ನು ವಿಧಿಸುವ ಮೂಲಕ ಜಾಮೀನು ನೀಡಿದೆ.

ನವನೀತ್ ಅವರ ಪರವಾಗಿ ಹಿರಿಯ ವಕೀಲ ರಮೇಶ್ ಚಂದರ್ ಮತ್ತು ನ್ಯಾಯವಾದಿ ಸಿ.ಪಿ.ಉದಯಭಾನು, ದೂರುದಾರರ ಪರವಾಗಿ ವಕೀಲ ಜಾನ್ ಎಸ್.ರಾಲ್ಫ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎ.ನೌಷಾದ್ ವಾದ ಮಂಡಿಸಿದರು.

Leave A Reply

Your email address will not be published.