33ರ ಹರೆಯದ ಪುರುಷನೋರ್ವನಿಗೆ ಮುಟ್ಟಿನ ಸಮಸ್ಯೆ| ಪರೀಕ್ಷೆಗೊಳಗಾದಾಗ ಗೊತ್ತಾಯ್ತು ಒಂದು ಭೀಕರ ಸತ್ಯ!
ಮುಟ್ಟು ಸಾಮಾನ್ಯವಾಗಿ ಹೆಣ್ಮಕ್ಕಳಿಗೆ ಆಗುವುದು ಇದು ಎಲ್ಲರಿಗೂ ಗೊತ್ತೇ ಇದೆ. ಪ್ರಕೃತಿದತ್ತ ಪ್ರಕ್ರಿಯೆಯೊಂದು ಹೆಣ್ಣು ಮಕ್ಕಳಿಗೆ ವರದಾನ ಎಂದೇ ಹೇಳಬಹುದು. ಆದರೆ ಇಲ್ಲೊಂದು ಕಡೆ ಪುರುಷನೋರ್ವನಿಗೆ ಹೆಣ್ಣು ಮಕ್ಕಳಿಗೆ ಆಗುವ ರೀತಿಯಲ್ಲೇ ಮುಟ್ಟಿನ ಎಲ್ಲಾ ಸಮಸ್ಯೆಗಳು ಕಂಡು ಬಂದಿದ್ದು, ವಿಜ್ಞಾನ ಲೋಕಕ್ಕೇ ಆಶ್ಚರ್ಯ ಮೂಡಿಸಿದೆ.
33 ವರ್ಷದ ಪುರುಷನಿಗೆ ಮೂತ್ರ ವಿಸರ್ಜನೆ ವೇಳೆ ರಕ್ತ ಬರುವ ಮತ್ತು ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಂಡಿದ್ದಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿದಾಗ ಅವನ ದೇಹದಲ್ಲಿ ಸ್ತ್ರೀಯ ಅಂಗಾಂಶಗಳು ಇರುವುದು ತಿಳಿದು ಬಂದಿದೆ.
ತನ್ನ ಮೂತ್ರದಲ್ಲಿ ರಕ್ತವನ್ನು ಕಂಡು ಮತ್ತು ನಿಯಮಿತವಾಗಿ ಹೊಟ್ಟೆ ನೋವನ್ನು ಅನುಭವಿಸಿದ ನಂತರ ವೈದ್ಯರ ಬಳಿಗೆ ಹೋದ ಚೀನಾದ ವ್ಯಕ್ತಿಯೊಬ್ಬರು ಅಂಡಾಶಯ ಮತ್ತು ಗರ್ಭಾಶಯವನ್ನು ಹೊಂದಿರುವುದು ತಿಳಿದು ಬಂದಿದೆ. ಹೌದು, ಹಲವಾರು ವೈದ್ಯಕೀಯ ಪರೀಕ್ಷೆ, ಕ್ರೋಮೋಸೋಮ್ ವಿಶ್ಲೇಷಣೆ ಪರೀಕ್ಷೆಯ ನಂತರ ಆ ಪುರುಷ ವ್ಯಕ್ತಿ ಜೈವಿಕವಾಗಿ ಮಹಿಳೆ ಎಂದು ವೈದ್ಯರು ಹೇಳಿದ್ದಾರಂತೆ.
33 ವರ್ಷಗಳಿಂದ ಪುರುಷ ಎಂದು ಗುರುತಿಸಿಕೊಂಡಿದ್ದ ಚೆನ್ ಲಿ ( ಹೆಸರು ಬದಲಾಯಿಸಲಾಗಿದೆ) ಎಂಬಾತನೇ ಈ ಅಪರೂಪದ ವ್ಯಕ್ತಿ.
ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಚೆನ್ ಪ್ರೌಢಾವಸ್ಥೆಯಲ್ಲಿ ತನ್ನ ಅನಿಯಮಿತ ಮೂತ್ರ ವಿಸರ್ಜನೆಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನಂತೆ. ಆದರೆ ನಂತರ ಅವರ ಮೂತ್ರದಲ್ಲಿ ರಕ್ತ ಬರುವ ಸಮಸ್ಯೆ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳ ತೊಡಗಿತು. ಆತನ ಹೊಟ್ಟೆ ನೋವು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಇತ್ತಂತೆ. ಇದನ್ನು ಡಾಕ್ಟರ್ ಗೆ ಹೇಳಿದಾಗ, ಆತನನ್ನು ಪರೀಕ್ಷಿಸಿದ ವೈದ್ಯರು ಆ ಪುರುಷ ವ್ಯಕ್ತಿಗೆ ಅಪೆಂಡಿಸೈಟಿಸ್ ಎಂದು ಚಿಕಿತ್ಸೆ ನೀಡಿದ್ದರು. ಆದರೂ ರೋಗಲಕ್ಷಣಗಳು ಮುಂದುವರೆಯಿತು.
ಕಳೆದ ವರ್ಷ, ತಪಾಸಣೆಯ ಸಮಯದಲ್ಲಿ ಚೆನ್ ಅವರಿಗೆ ಸ್ತ್ರೀಯ ಲೈಂಗಿಕ ವರ್ಣತಂತುಗಳು ಇರುವುದು ತಿಳಿದು ಬಂದಿದೆ. ಮತ್ತೊಂದು ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಗರ್ಭಾಶಯ ಮತ್ತು ಅಂಡಾಶಯ ಸೇರಿದಂತೆ ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿದ್ದಾರೆಂದು ತಿಳಿದು ಬಂದಿದೆ. ಚೆನ್ ಗಂಡು ಮತ್ತು ಹೆಣ್ಣು ಸಂತಾನೋತ್ಪತ್ತಿ ಅಂಗಗಳೊಂದಿಗೆ ಇಂಟರ್‌ಸೆಕ್ಸ್‌ನಲ್ಲಿ ಜನಿಸಿರುವುದಾಗಿ ಅಂತಿಮವಾಗಿ ವೈದ್ಯಕೀಯ ವರದಿಯಲ್ಲಿ ತಿಳಿದುಬಂದಿದೆ.
ಆತನಲ್ಲಿ ಪುರುಷ ಲೈಂಗಿಕ ಹಾರ್ಮೋನ್ ಆಂಟ್ರೊಜೆನ್ ಮಟ್ಟಗಳು ಸರಾಸರಿಗಿಂತ ಕೆಳಗಿವೆ, ಆದರೆ ಸ್ತ್ರೀ ಲೈಂಗಿಕ ಹಾರ್ಮೋನುಗಳ ಮಟ್ಟಗಳು ಮತ್ತು ಅಂಡಾಶಯದ ಚಟುವಟಿಕೆಯು ಆರೋಗ್ಯಕರ ವಯಸ್ಕ ಮಹಿಳೆಯರಲ್ಲಿ ಕಂಡುಬರುವ ಮಟ್ಟಕ್ಕೆ ಇತ್ತು. ಈ ಕಾರಣದಿಂದಾಗಿ ಮೂತ್ರದಲ್ಲಿ ರಕ್ತ ಮತ್ತು ಹೊಟ್ಟೆ ನೋವು ಕಾಣಿಸಿ ಕೊಳ್ಳುತ್ತಿದ್ದದ್ದು ಮುಟ್ಟಿನ ಲಕ್ಷಣಗಳಾಗಿತ್ತು.
ಇತ್ತೀಚೆಗೆ ಚೆನ್ ತನ್ನ ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ತೆಗೆದುಹಾಕಲು ಗುವಾಂಗ್‌ಝ ಆಸ್ಪತ್ರೆಗೆ ದಾಖಲಾಗಿ, ಜೂನ್ 6 ರಂದು ಮೂರು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. 10 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.
ವಿಶ್ವ ಸಂಸ್ಥೆಯು ವಿಶ್ವದ ಜನಸಂಖ್ಯೆಯ ಸುಮಾರು 0.05 ರಿಂದ 1.7 ಪ್ರತಿಶತದಷ್ಟು ಜನರು ಇಂಟರ್‌ಸೆಕ್ಸ್ ಆಗಿದ್ದಾರೆ ಎಂದು ತಿಳಿಸಿದೆ.