ವಿಶಾಲಾ ಗಾಣಿಗ ಮರ್ಡರ್ ನ ಸುಪಾರಿ ಕಿಲ್ಲರ್ ಅರೆಸ್ಟ್
ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಿನಕೋಟೆ ಮಾಬುಕಳದ ಫ್ಲ್ಯಾಟ್‌ನಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಸುಪಾರಿ ಕಿಲ್ಲರ್‌ನನ್ನು ಈಗ ಬಂಧಿಸಲಾಗಿದೆ.
ಬ್ರಹ್ಮಾವರ ಪೊಲೀಸರು ಉತ್ತರ ಪ್ರದೇಶದ ಗೋರಖಪುರದಲ್ಲಿ ಈ ಮೂರನೇ ಆರೋಪಿ, ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಗೋರಖಪುರ ನಿವಾಸಿ ರೋಹಿತ್ ರಾಣಾ ಪ್ರತಾಪ್ (21) ಬಂಧಿತ ಆರೋಪಿ, ಕಳೆದ ಒಂದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಗೋರಖ ಪುರದಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಆರೋಪಿಯನ್ನು ಇಂದು ಕುಂದಾಪುರಕ್ಕೆ ಕರೆದು ಕೊಂಡು ಬಂದಿದ್ದು, ಬೆಳಗ್ಗೆ ಕುಂದಾಪುರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನಂತರ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
2021ರ ಜು.12ರಂದು ವಿಶಾಲ ಗಾಣಿಗ ಅವರನ್ನು ಅವರ ಪ್ಲಾಟಿನಲ್ಲಿ ಕತ್ತು ಬಿಗಿದು ಕೊಲೆ ಮಾಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪ್ರಕರಣದ ರೂವಾರಿ, ಆಕೆಯ ಪತಿ ರಾಮಕೃಷ್ಣ ಗಾಣಿಗ(42) ಹಾಗೂ ಈತನಿಂದ ಹತ್ಯೆಗೆ ಸುಪಾರಿ ಪಡೆದ ಗೋರಖಪುರದ ಸ್ವಾಮಿನಾಥ ನಿಶಾದ(38) ಎಂಬಾತನನ್ನು ಬಂಧಿಸಿದ್ದರು.
ವಿಶಾಲ ಗಾಣಿಗ ಕೇಸಿನ ಸಂಪೂರ್ಣ ಸ್ಟೋರಿ
ಉಡುಪಿ ಜಿಲ್ಲೆಯಲ್ಲಿ ಸೆನ್ಸೆಷನ್ ಕ್ರಿಯೇಟ್ ಮಾಡಿದ್ದ ವಿಶಾಲ ಗಾಣಿಗ ಹತ್ಯಾ ಕೇಸಿನ ಪ್ರಮುಖ ರೂವಾರಿ ಕೊನೆಗೂ ಪತ್ತೆಯಾಗಿದ್ದು, ದುರದೃಷ್ಟವಶಾತ್ ಆಕೆಯನ್ನು ರಕ್ಷಿಸಿ ಪ್ರೊಟೆಕ್ಷನ್ ಮಾಡಬೇಕಿದ್ದ ಆಕೆಯ ಗಂಡನೇ ಆಕೆಯ ಜೀವ ತೆಗೆದಿದ್ದಾನೆ.
ಅವತ್ತು ಈ ಕೇಸಿನಲ್ಲಿ ಯಾವುದೇ ಸಾಕ್ಷಿಗಳಿಲ್ಲ. ಕೊಲೆ ಮಾಡಿದ್ದನ್ನು ಯಾರೂ ಕಂಡಿರಲಿಲ್ಲ. ಅಪರಾಧಿಗಳ ಕೃತ್ಯವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಇಪ್ಪತ್ತನಾಲ್ಕು ಗಂಟೆಗಳು ವಾಚ್ ಮಾಡುವ ಸಿಸಿಟಿವಿ ಫುಟೇಜ್ ಇರಲಿಲ್ಲ. ಅವತ್ತು ಪೊಲೀಸರು ತನಿಖೆಗೆಂದು ಹೊರಟಾಗ ಬರಿಗೈಯಲ್ಲಿ ಹೊರಟಿದ್ದರು. ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಅವರು ಒಟ್ಟು ನಾಲ್ಕು ತಂಡ ಕಟ್ಟಿ ಬೆಸ್ಟ್ ವಿಷಸ್ ಎಂದು ಮಾತ್ರ ಹೇಳಿ ಆ ತಂಡಗಳನ್ನು ಕಳಿಸಿದ್ದರು.
ಹಾಗೆ ಬೆಲ್ಟು ಬಿಗಿ ಮಾಡಿಕೊಂಡು ಪೊಲೀಸರು ನಾಲ್ಕು ದಿಕ್ಕುಗಳಲ್ಲಿ ಹಂಚಿ ಹೋಗಿದ್ದರು. ಮೊದಲ ಹಂತವಾಗಿ ಕುಂದಾಪುರ ಮತ್ತು ಪಡುಬಿದ್ರಿಯ ಎಲ್ಲಾ ಸಿಸಿಟಿವಿಗಳನ್ನು ಪರೀಕ್ಷಿಸಲಾಯಿತು. ಆದರೆ ಯಾವುದೇ ಕ್ಯೂ ಕೊಡುವಲ್ಲಿ ಅವುಗಳು ವಿಫಲವಾದವು. ಕೊಲೆ ನಡೆದ ಫ್ಲಾಟಿನ ಸುತ್ತಮುತ್ತ ವಾಸಿಸುತ್ತಿರುವ ಜನರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಯಿತು. ತನಿಖೆಗಾಗಿ ಹಾಸನ ಆಂಧ್ರಪ್ರದೇಶ ಹೀಗೆ ಹಲವಾರು ಕಡೆ ಪೊಲೀಸರು ಬಸ್ಸು ಹತ್ತಿದ್ದರು. ಅಷ್ಟರಲ್ಲಿ ಒಂದು ಚಿಕ್ಕ ಲೀಡ್ ಪೊಲೀಸರ ಕೈಗೆ ಸಿಕ್ಕಿತ್ತು. ಅದು ಉತ್ತರಪ್ರದೇಶದ ಬೊಟ್ಟುಮಾಡಿ ತೋರಿಸುತ್ತಿತ್ತು. ಉತ್ತರ ಪ್ರದೇಶದ ಗೋರಕ್ ಪುರ ಎಸ್ಪಿ ಮತ್ತು ಅವರ ತಂಡ ಆತನಿಗಾಗಿ ಹುಡುಕಾಟ ನಡೆಸಿತ್ತು. ಅದೇ ಸಮಯಕ್ಕೆ ಇನ್ನೊಂದು ಲೀಡ್ ಪೊಲೀಸರಿಗೆ ದೊರೆತಿದ್ದು ಅದು ಭಾರತದ ಗಡಿಯತ್ತ ದಿಕ್ಕು ತೋರಿಸುತ್ತಿತ್ತು. ಪೊಲೀಸರಿಗೆ ಅಷ್ಟು ಸಾಕಿತ್ತು. ಕೂಡಲೇ ನೇಪಾಳ ಗಡಿಯಲ್ಲಿ ಸುಪಾರಿ ಕಿಲ್ಲರ್ ಒಬ್ಬನನ್ನು ಅರೆಸ್ಟ್ ಮಾಡುತ್ತಾರೆ. ಆತ ಬಾಯ್ದಿಟ್ಟಿದ್ದು ರಾಮಕೃಷ್ಣನ ಹೆಸರು.
ವಿಶಾಲ ಗಾಣಿಗಳ ಪತಿ ರಾಮಕೃಷ್ಣ ಗಾಣಿಗ ಸುಮಾರು 7 ತಿಂಗಳ ಹಿಂದೆ ಪತ್ನಿ ಹತ್ಯೆಗೆ ಸಂಚು ನಡೆಸಿದ್ದ. ಆತ ದುಬೈನಲ್ಲಿ ಕೂತುಕೊಂಡೆ ಹತ್ಯೆಯ ಸ್ಕೆಚ್ ಬರೆದಿದ್ದ. ಈ ಸುಪಾರಿ ಹತ್ಯೆಗಾಗಿ ಆತ ಕಿಲ್ಲರ್ ಗಳಿಗೆ 2,00,000 ಅಡ್ವಾನ್ಸ್ ನೀಡಿದ್ದ. ಇದು ಮಾರ್ಚ್ ತಿಂಗಳಿನಲ್ಲಿ ನಡೆದುಹೋಗಿತ್ತು. ಮೊದಲಿಗೆ ರಾಮಕೃಷ್ಣ ಗಾಣಿಗನಿಗೆ ಆತನ ಅಪರಿಚಿತನೊಬ್ಬ ಸುಪಾರಿ ಕಿಲ್ಲರ್ ಗಳ ಮಾಡಿಕೊಟ್ಟಿದ್ದ. ಆತನ ಮೂಲಕ ಸುಪಾರಿ ಕಿಲ್ಲರ್ ಗಳನ್ನು ಸಂಪರ್ಕಿಸಿದ ರಾಮಕೃಷ್ಣ ಗಾಣಿಗ ಅವನಿಗೆ ಅಡ್ವಾನ್ಸ್ ಮಾಡಿದ್ದ. ತಾನು ದುಬೈನಲ್ಲಿ ಇರುವುದರಿಂದ ಯಾವುದೇ ಕಾರಣಕ್ಕೂ ತನ್ನ ಮೇಲೆ ಅನುಮಾನ ಬರುವುದಿಲ್ಲ, ತಾನು ಸೇಫ್ ಅಂದುಕೊಂಡಿದ್ದ ರಾಮಕೃಷ್ಣ.
ಕೊಲೆ ನಡೆಯುವುದಕ್ಕಿಂತ ಒಂದು ವಾರದ ಮುಂಚಿತವಾಗಿ ವಿಶಾಲ ಗಾಣಿಗಳಿಗೆ ಗಿಫ್ಟ್ ಪಾರ್ಸೆಲ್ ಒಂದು ಬಂದಿತ್ತು. ಆ ಪಾರ್ಸೆಲ್ ಕೊರಿಯರ್ ಶಾಪಿಗೆ ಬಂದಿದ್ದು ಅದನ್ನು ರಾಮಕೃಷ್ಣ ಗಾಣಿಗನೆ ಕಳಿಸಿದ್ದ. ಸಾಮಾನ್ಯವಾಗಿ ವಿಶಾಲ ಗಾಣಿಗ ಒಬ್ಬಳೇ ಹೊರಗಡೆ ಬರುತ್ತಿರಲಿಲ್ಲ. ಆಕೆಯನ್ನು ಕೊಲೆ ಮಾಡಬೇಕಾದರೆ ಆಕೆ ಒಬ್ಬಂಟಿಯಾಗಿ ಸಿಗಬೇಕು. ಈ ಕಾರಣಕ್ಕಾದರೂ ಆಕೆ ಹೊರಕ್ಕೆ ಬರುತ್ತಾಳೆ ಎಂದು ಟೆಸ್ಟ್ ಮಾಡಲು ಆಕೆಗೆ ಕೊರಿಯರ್ ಕಳಿಸಲಾಗಿತ್ತು. ಅಂದು ಆಕೆ ಮನೆಯಿಂದ ಒಬ್ಬಳೇ ಬಂದು ಕೊರಿಯರ್ ಪಡೆದು ಮನೆಗೆ ವಾಪಸಾಗಿದ್ದರು.
ವಿದೇಶದಲ್ಲಿದ್ದ ವಿಶಾಲ ಗಾಣಿಗ ಜು.2ರಂದು ತನ್ನ ಪುತ್ರನೊಂದಿಗೆ ಊರಿಗೆ ಬಂದಿದ್ದು, ಉಪ್ಪಿನ ಕೋಟೆಯ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಜುಲೈ 7 ರಂದು ರಾಮಕೃಷ್ಣರ ಆಸ್ತಿಗೆ ಸಂಬಂಧಿಸಿದ ಪಾಲುಪಟ್ಟಿ ನಡೆದಿದ್ದು, ಜುಲೈ 12ರಂದು ವಿಶಾಲ ಗಾಣಿಗ ತನ್ನ ತಂದೆ, ತಾಯಿ ಹಾಗೂ ಪುತ್ರನೊಂದಿಗೆ ಆಟೋ ರಿಕ್ಷಾದಲ್ಲಿ ತಾಯಿ ಮನೆ ಗುಜ್ಜಾಡಿಗೆ ಹೋಗಿದ್ದರು.
ಅವತ್ತು, ಕೊಲೆ ನಡೆದ ದಿನ ಪತಿ ರಾಮಕೃಷ್ಣ ಪತ್ನಿಯನ್ನು ಒಬ್ಬಂಟಿಯಾಗಿ ಅಪಾರ್ಟೆಂಟಿಗೆ ಹೋಗಲು ಹೇಳಿದ್ದಾನೆ. ಗಂಡನ ಸೂಚನೆಯಂತೆ ಆಕೆಯ ಒಬ್ಬಂಟಿಯಾಗಿ ಅಪಾರ್ಟೆಂಟ್ ಗೆ ತೆರಳಿದ 5ರಿಂದ 10 ನಿಮಿಷದ ಒಳಗೆ ಅಡಿಯಿಟ್ಟಿದ್ದರು ಹಂತಕದ್ವಯರು. ಇನ್ನೈದು ನಿಮಿಷಗಳಲ್ಲಿ ಕೆಲಸ ಮುಗಿದಿತ್ತು. ವಿಶಾಲ ಗಾಣಿಗ ಕೊನೆಯ ಉಸಿರು ಕೂಡಾ ! ಇದು ಸುಪಾರಿ ಕಿಲ್ಲಿಂಗ್ ಎಂಬ ಬಗ್ಗೆ ಸಾಕ್ಷ್ಯ ಸಿಗಬಾರದೆಂದು ಅಪರಾಧ ನಡೆದ ನಂತರ ಕಿಲ್ಲರ್ ಗಳು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಕೊಲೆಗೆ ವೈಮನಸ್ಸು ಕಾರಣ?
ವಿಶಾಲ ಗಾಣಿಗ ಅವರ ಕೊಲೆಗೆ ಪತಿ, ಪತ್ನಿಯ ನಡುವಿನ ವೈಮನಸ್ಸು ಕಾರಣ ಎನ್ನುವ ಅಂಶ ಪ್ರಾಥಮಿಕ ತನಿಖೆ ವೇಳೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ ಯಾವ ವಿಚಾರದಲ್ಲಿ ವೈಮನಸ್ಸು ಇತ್ತು? ಫ್ಲ್ಯಾಟ್‌ಗೆ ಒಬ್ಬಂಟಿಯಾಗಿ ಹೋಗಿದ್ದು ಯಾಕೆ? ನಿರ್ದಿಷ್ಟವಾಗಿ ಯಾವ ವಿಚಾರದಲ್ಲಿ ಕೊಲೆಯಾಗಿದೆ ಎನ್ನುವುದು ಆನಂತರ ತನಿಖೆಯ ನಂತರ ಬಹಿರಂಗ ಆಗಿತ್ತು. ಅದಲ್ಲದೆ, ಆಕೆಯ ಕೊಲೆ ನಡೆದ ನಂತರ ಪತಿ ಏನೂ ಗೊತ್ತಿಲ್ಲದವನಂತೆ ದುಬೈನಿಂದ ಊರಿಗೆ ಬಂದು ಗೋಳಾಡಿದ್ದ. ಆಕೆಯ ಮರಣೋತ್ತರ ಕ್ರಿಯೆಗಳಲ್ಲಿ ಪ್ರತಿಯೊಂದರಲ್ಲೂ ದುಃಖ ತಪ್ತನಾಗಿ ಭಾಗವಹಿಸಿದ್ದ.
ಬಂಧಿತ ರಾಮಕೃಷ್ಣ ಅಸ್ಪಷ್ಟವಾಗಿ ಪ್ರತಿಕ್ರಿಯಿಸುತ್ತಿದ್ದಾನೆ. ಪೊಲೀಸರಿಗೆ ಕೊಲೆಗೆ ಬೇರೆ ಕಾರಣವೂ ಇರಬಹುದೆಂಬ ಸಂಶಯ ಬಲವಾದ ಅನುಮಾನ ಮೂಡಿರುವ ಮೇರೆಗೆ ಪೊಲೀಸರು ರಾಮಕೃಷ್ಣನನ್ನು ಜುಲೈ 23 ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸಿ ತನಿಖೆ ನಡೆಸಿದ್ದರು.
ನಡೆದ ತನಿಖೆಯ ಹಲವು ಹಂತಗಳ ನಂತರ ಮೃತ ಗೃಹಿಣಿ ವಿಶಾಲ ಗಾಣಿಗ ಅವರ ಪತಿಯ ಸುತ್ತ ಅನುಮಾನದ ಮುಳ್ಳು ಗರಗರನೆ ತಿರುಗುತ್ತಿತ್ತು. ಅದರಂತೆ ಉಡುಪಿ ಪೊಲೀಸರು ಆಕೆಯ ಗಂಡ ರಾಮಕೃಷ್ಣ ಗಾಣಿಗನನ್ನ ಠಾಣೆಗೆ ಕರೆತಂದು ರಾತ್ರಿ ಹಗಲು ಡ್ರಿಲ್ ಮಾಡಿದ್ದರು. ಪೊಲೀಸರು ತಮಗೆ ದೊರೆತ ಸಾಂದರ್ಭಿಕ ಮತ್ತು ಟೆಕ್ನಿಕಲ್ ಎವಿಡೆನ್ಸ್ ತಾಳೆಹಾಕಿ ಅಳೆದು ನೋಡಿದ್ದರು.
ವಿಶಾಲ ಅವರ ಪತಿ ರಾಮಕೃಷ್ಣ, ದುಬೈನಲ್ಲಿದ್ದುಕೊಂಡೇ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಅನುಮಾನಿಸಿ ಆತನನ್ನು ತೀವ್ರ ವಿಚಾರಣೆ ನಡೆಸಿದಾಗ ವಿಷಯ ಬಹಿರಂಗವಾಗಿದೆ. ಬಾಡಿಗೆ ಹಂತಕರ ಮೂಲಕ ಪತ್ನಿಯನ್ನು ಕೊಲೆಗೈಯಲು ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಸುಪಾರಿ ನೀಡಿದ್ದ, ಉತ್ತರ ಭಾರತ ಮೂಲದ ಸುಪಾರಿ ಹಂತಕರ ಮೂಲಕ ಕೊಲೆ ಮಾಡಿಸಿದ್ದಾಗಿ ತಿಳಿದುಬಂದಿದೆ. ಗಂಡ ಹೊಂದಿದ್ದ ಅಕ್ರಮ ಸಂಬಂಧ ಮತ್ತು ಹಲವು ವ್ಯವಹಾರಗಳ ಕಾರಣಕ್ಕಾಗಿ ಸುಪಾರಿ ಕಿಲ್ಲರ್ಸ್
ಗಳನ್ನು ಬಳಸಿ ಕೊಲೆ ನಡೆಸಿದ್ದಾಗಿ ಹಂತಕ ಪಡೆ ಒಪ್ಪಿಕೊಂಡಿದೆ. ಕೊಲೆಗೈದ ಸುಪಾರಿ ಹಂತಕರಲ್ಲಿ ಮೂರನೆಯ ವ್ಯಕ್ತಿ ಇಲ್ಲಿಯತನಕ ಸಿಕ್ಕಿರಲಿಲ್ಲ. ಈಗ ಆತನನ್ನು ಬೇಟೆಯಾಡಿ ತಂದಿದ್ದಾರೆ ಪೊಲೀಸರು. ಆತನ ತನಿಖೆ ನಂತರ ಇನ್ನಷ್ಟು ಮಾಹಿತಿಗಳು ಹೊರಬರಲಿವೆ.