ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಜಾಮೀನು ಸಿಕ್ಕ ಬೆನ್ನಲ್ಲೇ ಮತ್ತೊಂದು ವಾರೆಂಟ್ ಜಾರಿ
ಉತ್ತರ ಪ್ರದೇಶದ ಸೀತಾಪುರದಲ್ಲಿ ದಾಖಲಾಗಿದ್ದ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಟ್ವೀಟ್ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದರು. ಆದರೆ ಜಾಮೀನು ಪಡೆದ ಬೆನ್ನಲ್ಲೇ ಇದೀಗ ಲಖೀಂಪುರ ಖೇರಿ ಪೊಲೀಸರು ವಾರೆಂಟ್ ಜಾರಿಗೊಳಿಸಿದ್ದಾರೆ.
ಲಖೀಂಪುರ ಖೇರಿ ಪೊಲೀಸರು ವರ್ಷದ ಹಿಂದೆ ದಾಖಲಿಸಿದ್ದ 153 ಎ ಪ್ರಕರಣದಲ್ಲಿ ಮೊಹಮ್ಮದ್ ಜುಬೇರ್‌ಗೆ ವಾರೆಂಟ್ ಜಾರಿಗೊಳಿಸಿದ್ದಾರೆ. ಹೀಗಾಗಿ ಜುಬೇರ್ ಅವರು ಜುಲೈ 11 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
ಸುದರ್ಶನ್ ನ್ಯೂಸ್ ಚಾನಲ್‌ನ ಜಿಲ್ಲಾ ವರದಿಗಾರ, ಲಖಿಂಪುರ ಖೇರಿ ಜಿಲ್ಲೆಯ ಮೊಹಮ್ಮದಿ ಮೂಲದ ಆಶಿಶ್ ಕುಮಾರ್ ಕಟಿಯಾರ್ ಅವರು 2021 ರಲ್ಲಿ ಆಲ್ಟ್ ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೇರ್ ವಿರುದ್ಧ ಮೊಹಮ್ಮದಿ ಪೊಲೀಸ್ ಠಾಣೆ ಮತ್ತು ಲಖಿಂಪುರ ಖೇರಿ ಎಸ್‌ಪಿಗೆ ದೂರು ನೀಡುವ ಮೂಲಕ ಪ್ರಕರಣ ದಾಖಲಿಸಿದ್ದರು.
ನ್ಯೂಸ್ ಚಾನಲ್‌ನಲ್ಲಿ ಪ್ರಸಾರವಾದ ಸುದ್ದಿಯೊಂದಕ್ಕೆ ಮೊಹಮ್ಮದ್ ಜುಬೇರ್ ಗ್ರಾಫಿಕ್ಸ್ ಮೂಲಕ ವದಂತಿಗಳನ್ನು ಹರಡಿ, ದೇಶದ ವಾತಾವರಣವನ್ನು ಹಾಳು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಮೊಹಮ್ಮದಿಯಲ್ಲಿ ದಾಖಲಾದ ಪ್ರಕರಣದಲ್ಲಿ ಮೊಹಮ್ಮದ್ ಜುಬೇರ್‌ಗೆ ವಾರಂಟ್ ಜಾರಿ ಮಾಡಲಾಗಿದೆ ಎಂದು ಲಖೀಂಪುರ ಖೇರಿ ಎಸ್ಪಿ ಸಂಜೀವ್ ಸುಮನ್ ತಿಳಿಸಿದ್ದಾರೆ.
ಈ ಹಿನ್ನೆಲೆ ಜುಲೈ 11 ರಂದು ಎಸಿಜೆಎಂ ನ್ಯಾಯಾಲಯಕ್ಕೆ ಮೊಹಮ್ಮದ್ ಜುಬೇರ್ ಅವರು ಹಾಜರಾಗಬೇಕಿದೆ. ಶುಕ್ರವಾರ, ಸ್ಥಳೀಯ ನ್ಯಾಯಾಲಯಕ್ಕೆ ತೆರಳಿದ ಲಖಿಂಪುರ ಖೇರಿ ಪೊಲೀಸರು, ಜುಬೇರ್ ವಿರುದ್ಧ ವಾರಂಟ್ ಪಡೆದು, ಜುಬೈರ್ ಇರುವ ಸೀತಾಪುರ ಜಿಲ್ಲಾ ಕಾರಾಗೃಹದಲ್ಲಿ ವಾರಂಟ್ ಸಲ್ಲಿಸಿದರು.