ಮಣ್ಣಲ್ಲಿ ಮಣ್ಣಾದ ವಾಸ್ತುತಜ್ಞ ಚಂದ್ರಶೇಖರ ಗುರೂಜಿ!
ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ್ ಮಣ್ಣಲ್ಲಿ ಮಣ್ಣಾಗಿದ್ದಾರೆ. ವೀರ ಶೈವ ಲಿಂಗಾಯತ ಸಂಪ್ರದಾಯದಂತೆ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳಾ ಗ್ರಾಮದ ಬಳಿಯ ಜಮೀನಿನಲ್ಲಿ ಗುರೂಜಿಯವರ ಅಂತ್ಯಸಂಸ್ಕಾರ ನೆರವೇರಿದೆ. ಅಣ್ಣನ ಮಗ ಸಂತೋಷ್ ಅಂಗಡಿ ಅಂತಿಮ ವಿಧಿವಿಧಾನ ಮಾಡಿದ್ದಾರೆ. ಗುರೂಜಿ ಮೃತದೇಹಕ್ಕೆ ಪತ್ನಿ ಅಂಕಿತಾ ಅಂತಿಮ ಪೂಜೆ ಸಲ್ಲಿಸಿ, ನಂತರ ಪಂಚಾಕ್ಷರಿ ಮಹಾ ಮಂತ್ರದೊಂದಿಗೆ ಅಂತಿಮ ವಿಧಿವಿಧಾನ ನೆರವೇರಿದೆ. ಅರ್ಚಕ ಕೋಟ್ರಯ್ಯ ಶ್ರೀಗಳ ನೇತೃತ್ವದಲ್ಲಿ ಪುತ್ರಿ ಸ್ವಾತಿ, ಅಣ್ಣನ ಮಗ ಸಂತೋಷ್ ನಿಂದ ವಿಧಿವಿಧಾನ ನೆರವೇರಿತು. 10 ಸ್ವಾಮೀಜಿಗಳು ಅಂತಿಮ ವಿಧಿವಿಧಾನದಲ್ಲಿ ಇದ್ದರು.
ಖ್ಯಾತ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ್ ಗುರೂಜಿಯನ್ನು ಹುಬ್ಬಳ್ಳಿಯ ಸುಳ್ಳಾ ಗ್ರಾಮದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಈ ಅಂತಿಮ ಕಾರ್ಯಕ್ರಮ ನಡೆಯುತ್ತಿರುವ ಸ್ಥಳದಲ್ಲಿ ಅವರ ಶ್ವಾನ ಪ್ರಿನ್ಸ್ ́ಕೂಡಾ ಕಣ್ಣೀರಿಟ್ಟಿತು. ಅಲ್ಲಿ ಸೇರಿದ್ದ ತನ್ನ ಪತ್ನಿ ಅಂಕಿತಾ ಹಾಗೂ ಮಗಳು ಸೇರಿದಂತೆ ಕುಟುಂಬಸ್ಥರು, ಸಿಬ್ಬಂದಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಗುರೂಜಿಯವರ ಅಂತಿಮ ವಿಧಿವಿಧಾನದಲ್ಲಿ ಭಾಗಿಯಾಗಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಚಂದ್ರಶೇಖರ್ ಗುರೂಜಿ ಹತ್ಯೆ ಖಂಡನೀಯ ಎಂದು ಹೇಳಿದ್ದಾರೆ. ಎಷ್ಟೇ, ಹಣಕಾಸಿನ ವ್ಯವಹಾರ ಇದ್ದರೂ, ಕೊಲೆನೇ ಮಾರ್ಗ ಅಲ್ಲ. ಕೋರ್ಟ್ ಇದೆ, ನ್ಯಾಯಯವಿದೆ. ಪೊಲೀಸರು ನಾಲ್ಕ ಘಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.