ನೂಪುರ್ ಶರ್ಮಾ ಶಿರಚ್ಛೇದ ನಡೆಸಿದವರಿಗೆ ತನ್ನ ಮನೆ ದಾನ ನೀಡೋದಾಗಿ ಹೇಳಿದ್ದ ಅಜ್ಮೀರ್ ದರ್ಗಾ ಮೌಲ್ವಿ ಬಂಧನ
ಅಜ್ಮೀರ್: ಬಿಜೆಪಿಯ ಅಮಾನತುಗೊಂಡಿರುವ ವಕ್ತಾರೆ ನೂಪುರ್ ಶರ್ಮಾ ಶಿರಚ್ಛೇದ ಮಾಡಿದವರಿಗೆ ತಮ್ಮ ಮನೆಯನ್ನು ದಾನ ನೀಡುವುದಾಗಿ ಕ್ಯಾಮರಾ ಮುಂದೆ ಹೇಳಿದ್ದ ಅಜ್ಮೀರ್ ದರ್ಗಾ ಮೌಲ್ವಿಯನ್ನು ಬಂಧಿಸಲಾಗಿದೆ.
ಆತನ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲಾಗಿದ್ದ ಇತಿಹಾಸವಿದ್ದು, ಈ ಬಾರಿ ಆತ ಅಮಲು ಪದಾರ್ಥ ಸೇವಿಸಿದ ಸ್ಥಿತಿಯಲ್ಲಿ ವಿಡಿಯೋ ಮಾಡಿದ್ದಿರಬಹುದು ಎಂದು ನಂಬಲಾಗಿದೆ. ಅಜ್ಮೀರ್ ಪೊಲೀಸರು ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರು ಮಾಹಿತಿ ನೀಡಿರುವ ಪ್ರಕಾರ ಖಾದೀಮ್ ಸಲ್ಮಾನ್ ಎಂಬ ಮೌಲ್ವಿ ಉದಯ್ ಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣಕ್ಕೂ ಮುನ್ನ ಈ ವಿಡಿಯೋ ಮಾಡಿದ್ದಾನೆ.
ವಿಡಿಯೋದಲ್ಲಿ ನೂಪುರ್ ಶರ್ಮಾ ಬಗ್ಗೆ ಮಾತನಾಡಿರುವ ಮೌಲ್ವಿ, ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿ ತಲೆ ತಂದು ತಮಗೆ ಕೊಟ್ಟವರಿಗೆ ತಮ್ಮ ಮನೆಯನ್ನು ನೀಡುತ್ತೇನೆ, ಪ್ರವಾದಿಯನ್ನು ಅವಮಾನ ಮಾಡಿದ್ದಕ್ಕಾಗಿ ಆಕೆಯ ತಲೆಯನ್ನು ಶೂಟ್ ಮಾಡುವುದಾಗಿ ಮೌಲ್ವಿ ಹೇಳಿದ್ದಾನೆ.
ನೀವು ಎಲ್ಲಾ ಮುಸ್ಲಿಮ್ ರಾಷ್ಟ್ರಗಳಿಗೂ ಪ್ರತಿಕ್ರಿಯೆ ನೀಡಬೇಕು, ನಾನು ಇದನ್ನು ರಾಜಸ್ಥಾನದ ಅಜ್ಮೀರ್ ನಿಂದ ಹೇಳುತ್ತಿದ್ದೇನೆ. ಹಾಗೂ ಈ ಸಂದೇಶ ಹುಜೂರ್ ಕ್ವಾಜ ಬಾಬಾ ಕಾ ದರ್ಬಾರ್ ನಿಂದ ಬರುತ್ತಿದೆ ಎಂದು ಹೇಳಿದ್ದಾನೆ. ಈ ಸ್ಥಳ ಸೂಫಿಗಳಿಗೆ ಸಂಬಂಧಿಸಿದ ಧಾರ್ಮಿಕ ಸ್ಥಳವಾಗಿದ್ದು, ಹಿಂದೂ ಭಕ್ತರೂ ಕೂಡಾ ಇಲ್ಲಿಗೆ ಆಗಮಿಸುತ್ತಾರೆ. ತಾನು ಜೂ.28 ಕ್ಕಿಂತಲೂ ಮೊದಲೇ ಈ ವಿಡಿಯೋ ಮಾಡಿದ್ದು ಆ ಬಳಿಕ ಅದನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿರುವುದಾಗಿ ಪೊಲೀಸರಿಗೆ ಆತ ಮಾಹಿತಿ ನೀಡಿದ್ದಾನೆ. ಮೇಲ್ನೋಟಕ್ಕೆ ಆತ ಅಮಲು ಪದಾರ್ಥ ಸೇವಿಸಿ ಈ ವಿಡಿಯೋ ಮಾಡಿದ್ದು, ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.