ಶ್ರೀ ಮಧೂರು ದೇವಸ್ಥಾನ ಜಲಾವೃತ !
ಕರಾವಳಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಭಾಗಶಃ ಜಲಾವೃತವಾಗಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಕಾಸರಗೋಡು ಜಿಲ್ಲೆಯ ಮಧೂರು ದೇವಸ್ಥಾನದಲ್ಲಿ ನೆರೆ ಬಂದಿದ್ದು ದೈನಂದಿನ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದೆ.
ದೇವಸ್ಥಾನದ ಮುಂದೆ ಇರುವ ಹೊಳೆ ತುಂಬಿ ನೀರು ಹರಿದು ಬಂದಿದ್ದು, ದೇವಸ್ಥಾನದ ಒಳಗೆ ಆಳೆತ್ತರದ ನೆರೆ ಸೃಷ್ಟಿಯಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಇದರ ಜೊತೆಗೆ ಪ್ರಖ್ಯಾತ ದೇವಾಲಯವಾದ ಮಧೂರು ದೇವಸ್ಥಾನ ಕೂಡಾ ಸಂಪೂರ್ಣ ಜಲಾವೃತಗೊಂಡಿದೆ.
ದೇಗುಲದ ಧ್ವಜಸ್ಥಂಭ ಕೂಡಾ ನೀರಿನಿಂದ ಆವೃತಗೊಂಡಿದೆ. ಇನ್ನು ಮಧುವಾಹಿನಿ ಹೊಳೆ ಉಕ್ಕಿಹರಿದು ಅಸುಪಾಸಿನಲ್ಲಿ ಇರುವ ತೋಟಗಳಿಗೂ ಹೊಕ್ಕಿ, ತೋಟ ಪೂರ್ತಿ ಜಲಾವೃತಗೊಂಡಿದೆ. ಇದರಿಂದ ಹಲವು ಕಡೆ ಕೃಷಿಗೂ ಹಾನಿಯಾಗಿದೆ. ದೇಗುಲದ ಸಮೀಪದಲ್ಲಿ ಹರಿಯುವ ಮಧುವಾಹಿನಿ ಹೊಳೆ ಮಳೆಯ ಪರಿಣಾಮದಿಂದಾಗಿ ದೇವಾಲಯದೊಳಗೇ ಹರಿದುಬಂದಿದ್ದು ದೇಗುಲದ ಸಿಬ್ಬಂದಿಗಳು ಪರದಾಡುವಂತಾಗಿದೆ.