ಸರಳ ವಾಸ್ತು ಗುರೂಜಿಯ ಕೊಲೆಗೆ ಕ್ಷಣಕ್ಕೊಂದು ಟ್ವಿಸ್ಟ್, ಹತ್ಯೆಯಾಕಾಯ್ತು ಗೊತ್ತಾ?
ಸರಳವಾಸ್ತು ಕಾರ್ಯಕ್ರಮದ ಮೂಲಕ ರಾಜ್ಯದ ಜನರ ಮನೆ ಮನೆ ಮಾತಾಗಿದ್ದಂತ ಚಂದ್ರಶೇಖರ್ ಗುರೂಜಿಯನ್ನು ಇಂದು ಹುಬ್ಬಳ್ಳಿಯಲ್ಲಿ ಭೀಕರವಾಗಿ ಚಾಕುವಿನಿಂದ ಇರಿದು ಇಬ್ಬರು ಆರೋಪಿಗಳು ಹತ್ಯೆಗೈದಿದ್ದಾರೆ. ಈ ಪ್ರಕರಣಕ್ಕೆ ಕ್ಷಣಕ್ಕೊಂದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ಕೊಲೆಯ ಹಿಂದೆ ಬೇನಾಮಿ ಆಸ್ತಿಯೇ ಕಾರಣ ಎನ್ನಲಾಗುತ್ತಿದೆ. ಅದರಲ್ಲೂ ಆಕೆಯೊಬ್ಬಳ ಹೆಸರಿನಲ್ಲಿ ಸಂಪಾದಿಸಿದ್ದಂತ ಆಸ್ತಿಯ ಮೂಲಕ ಹುಟ್ಟಿಕೊಂಡ ಜಗಳವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಒಟ್ಟು 60 ಬಾರಿ ಇರಿದಿರಿದು ಅವರನ್ನು ಕೊಲೆ ಮಾಡಲಾಗಿದೆ.
ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಹತ್ಯೆಗೀಡಾದ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಗೆ ಹುಬ್ಬಳ್ಳಿಯ ಮಹಾಂತೇಶ್ ಶಿರೋಳ್ ಆತ್ಮೀಯನಾಗಿದ್ದ. ಎಲ್ಲ ಸಂಬಂಧ ಚೆನ್ನಾಗಿ ಇರುವಾಗ ಮಹಾಂತೇಶ್ ಶಿರೋಳ್ ಎಂಬಾತನ ಪತ್ನಿ ವನಜಾಕ್ಷಿಯ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದರು ಎನ್ನಲಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಬಳಿಯಲ್ಲಿರುವಂತಹಾ ಅಪಾರ್ಮೆಂಟ್ ಸಹ ಆಕೆಯ ಹೆಸರಿಗೆ ನೋಂದಣಿ ಮಾಡಿಸಿದ್ದರು ಎನ್ನಲಾಗಿದೆ. ಆನಂತರ ಹಣಕಾಸು ವ್ಯವಹಾರದಲ್ಲಿ ಕಿರಿಕಿರಿ ಕಂಡು ಬಂದಿತ್ತು.
ಇದಷ್ಟೇ ಅಲ್ಲದೇ, ಹಲವು ಆಸ್ತಿ ನೋಂದಣಿ, ಹಣಕಾಸಿನ ವ್ಯವಹಾರವನ್ನು ತನ್ನ ಆಪ್ತ ಮಹಾಂತೇಶ್ ಪತ್ನಿ ವನಜಾಕ್ಷಿ ಹೆಸರಿನಲ್ಲಿ ಮಾಡಿದ್ದರು ಎನ್ನಲಾಗಿದೆ. ಇದೇ ಸಂಬಂಧ ಗಲಾಟೆ ನಡೆದಿತ್ತು.ಆಗ 2019ರಲ್ಲಿ ಸರಳವಾಸ್ತು ಸಂಸ್ಥೆಯ ಉದ್ಯೋಗಿಯಾಗಿದ್ದಂತ ವನಜಾಕ್ಷಿಯನ್ನು ಕೆಲಸ ಬಿಡಿಸಿದ್ದರು. ಅಲ್ಲದೆ, ಪದೇ ಪದೇ ತಾನು ಮಾಡಿಸಿಕೊಟ್ಟಿದ್ದಂತ ಆಸ್ತಿಯನ್ನು ವಾಪಾಸ್ ಕೊಡುವಂತೆ ಕೇಳಿದಾಗ ಚಂದ್ರಶೇಖರ್ ಗೂರೂಜಿ ವನಜಾಕ್ಷಿ ಮತ್ತು ಆಕೆಯ ಪತಿ ಮಹಾಂತೇಶ್ ಅನ್ನು ಕೇಳಿದ್ದರು. ಕೈಗೆ ಬಂಡ ಆಸ್ತಿಯನ್ನು ಬಿಟ್ಟು ಕೊಡುವ ಯೋಚನೆಯೇ ಪತಿ ಪತ್ನಿಯಲ್ಲಿ ಇರಲಿಲ್ಲ. ಇತ್ತೀಚಿಗೆ ಬೇರೆ ಈ ಸಂಬಂಧ ಗಲಾಟೆ ಆಗಿತ್ತು ಎನ್ನಲಾಗಿದೆ. ಹಾಗಾಗಿ, ಚಂದ್ರಶೇಖರ ಗುರೂಜಿಯನ್ನು ಮುಗಿಸಿದರೆ, ಈಗ ತಮ್ಮ ಹೆಸರಿನಲ್ಲಿರುವ ಎಲ್ಲಾ ಆಸ್ತಿ ತಮ್ಮದಾಗುತ್ತದೆ ಎನ್ನುವುದು ಈ ಕೊಲೆಯ ಮೋಟಿವ್. ಹಾಗಂತ ಇಡೀ ಹುಬ್ಬಳ್ಳಿ ಮಾತಾಡಿಕೊಳ್ಳುತ್ತಿದೆ. ಪೋಲೀಸರ ಯೋಚನೆಯ ಮತ್ತು ಕಾರ್ಯಾಚರಣೆಯ ದಿಕ್ಕು ಅದೇ ರೂಟ್ ನಲ್ಲಿದೆ.
ಈ ಹಿನ್ನಲೆಯಲ್ಲಿಯೇ ಇಂದು ಚಂದ್ರಶೇಖರ್ ಗುರೂಜಿಯನ್ನು ಆಪ್ತ ಮಹಾಂತೇಶ್ ಹಾಗೂ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದುಮ್ಮವಾಡದ ಮಂಜುನಾಥ್ ಎಂಬುವರು ಸೇರಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೇ ಚಂದ್ರಶೇಖರ್ ಗುರೂಜಿ ಕೊಲೆ ನಂತ್ರ ಮಹಾಂತೇಶ್ ನಾಪತ್ತೆಯಾಗಿರೋದು ಇದಕ್ಕೆ ಪುಷ್ಟಿಯನ್ನು ನೀಡುವಂತಿದೆ. ಈ ಎಲ್ಲಾ ನಿಟ್ಟಿನಲ್ಲಿಯೂ ಇದೀಗ ಐವರು ಎಸಿಪಿಗಳ ನೇತೃತ್ವದ ಪೊಲೀಸರ ತಂಡ ತನಿಖೆಗೆ ಇಳಿದಿದೆ.
ಮಹಾಂತೇಶ್ ಶಿರೋಳ್ ಪತ್ನಿ ವನಜಾಕ್ಷಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ವೇಗ ಪಡೆದುಕೊಳ್ಳುತ್ತಿದೆ. ದೇವರೊಂದಿಗೆ ಸಂಹವನ ಸಾಧಿಸಿದ್ದೇನೆ ಎನ್ನುತ್ತಿದ್ದ, ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯ ಸ್ವಂತ ವಾಸ್ತು ದೊಡ್ಡದಾಗಿ ತಪ್ಪಿದೆ. ವಾಸ್ತು ಲೆಕ್ಕಾಚಾರ ಯಾಕೆ ಎಲ್ಲಿ ಕೈ ಕೊಡ್ತು ಅಂತ ಯಾರಿಗೂ ಗೊತ್ತಾಗುತ್ತಿಲ್ಲ.