BREAKING NEWS| ಬಿ.ಸಿ.ರೋಡ್ : ಮಳೆಯ ನಡುವೆಯೇ ಹರಿಯಿತು ನೆತ್ತರು ! ಹಾರ್ನ್ ವಿಚಾರದಲ್ಲಿ ಬಿತ್ತು ಹೆಣ
ಮಂಗಳೂರು: ಬಿ.ಸಿ.ರೋಡಿನ ಶಾಂತಿ ಅಂಗಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ನಿನ್ನೆ ತಡರಾತ್ರಿ ಉಂಟಾದ ಮಾತಿನ ಚಕಮಕಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ.
ಬಿ.ಸಿ.ರೋಡಿನ ಬಸ್ ಡಿಪೋ ಬಳಿ ಬೈಕ್ ಹಾರ್ನ್ ವಿಚಾರದಲ್ಲಿ ಎರಡು ತಂಡಗಳ ನಡುವೆ ವಾಗ್ವಾದ ಉಂಟಾಗಿ ಜಗಳ ತಾರಕಕ್ಕೇರಿದ್ದು ,ಈ ಸಮಯದಲ್ಲಿ ಬಿ.ಸಿ.ರೋಡ್ ಶಾಂತಿ ಅಂಗಡಿ ನಿವಾಸಿ ಆಸಿಫ್ ಎಂಬವರನ್ನು ಚೂರಿ ಇರಿದು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಿ.ಸಿ.ರೋಡ್ ಕೈಕಂಬ ಸಮೀಪದ ಶಾಂತಿ ಅಂಗಡಿ ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಮುಹಮ್ಮದ್ ಆಸಿಫ್ (32) ಕೊಲೆಯಾದ ಯುವಕ. ಬಂಟ್ವಾಳದ ಮಾರಿಪಳ್ಳ ನಿವಾಸಿಗಳಾದ ನೌಫಲ್ ಮತ್ತು ನೌಶೀರ್ ಎಂಬವರು ಕೊಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಈಗ ಕೊಲೆಯಾದ ಆಸಿಫ್ ದಿನವೂ ತನ್ನ ಬೈಕಿನಲ್ಲಿ ಹೋಗುವಾಗ ಪೊನ್ನೋದಿಯಲ್ಲಿರುವ ಆರೋಪಿಗಳ ಹೋಟೆಲ್ ನ ಮುಂದೆ ಹಾದು ಹೋಗುತ್ತಿದ್ದ. ಆಗ ಆತ ದಿನವೂ ಹಾರ್ನ್ ಮಾಡುತ್ತಿದ್ದ ಎನ್ನುವುದು ಮೊದಲಿಗೆ ವ್ಯಾಜ್ಯಕ್ಕೆ ಕಾರಣ ಆಯಿತು. ನಿನ್ನೆ ಸಂಜೆ ಹಾಗೆ ಹಾರ್ನ್ ಮಾಡುವಾಗ ಅದನ್ನು ನೌಫಲ್ ಮತ್ತು ನೌಶೀರ್ ಎಂಬಿಬ್ಬರು ಆರೋಪಿಗಳು ಪ್ರಶ್ನಿಸಿದ್ದರು. ದಾರಿಯಲ್ಲಿ ಅಡ್ಡ ನಿಲ್ಲಿಸಿ ವಾಗ್ವಾದಕ್ಕೆ ಇಳಿದಿದ್ದರು.
ಆಗ ಆಸಿಫ್ ತನ್ನ ತಮ್ಮನಿಗೆ ಮತ್ತು ಗೆಳೆಯರಿಗೆ ಕರೆ ಮಾಡಿ ಎಲ್ಲರನ್ನು ಅಲ್ಲಿಗೆ ಕರೆಸಿದ್ದ. ನಂತರ ಆಸಿಫ್ ತನ್ನ ಸ್ನೇಹಿತರು ಅಲ್ಲಿಗೆ ಬಂದಿದ್ದು ಎರಡು ಕಡೆಯವರ ನಡುವೆ ಮತ್ತೆ ವಾಗ್ವಾದ, ಗಲಾಟೆ ನಡೆದಿದೆ. ಮರದ ದಿಂಡಿನಿಂದ ಹೊಡೆದುಕೊಂಡಿದ್ದಾರೆ. ತನ್ನವರಿಗೆ ಏಟು ಬೀಳುತ್ತಿರುವುದನ್ನು ತಡೆಯಲು ಆಸೀಫ್ ಹೋಗಿದ್ದಾನೆ. ಮೊದಲೇ ಹಾರ್ನ್ ವಿಷಯದಲ್ಲಿ ಆಸಿಫ್ ಮೇಲೆ ಕೋಪಗೊಂಡಿದ್ದ ನೌಫಲ್ ಮತ್ತು ನೌಶೀರ್ ಸೇರಿ ಆಸಿಫ್ ಗೆ ಚೂರಿಯಿಂದ ಇರಿದಿದ್ದಾರೆ ಎನ್ನಲಾಗಿದೆ.
ಮೃತ ಆಸೀಫ್ ಅವಿವಾಹಿತನಾಗಿದ್ದು, ಯುವಕನನ್ನು ಆಸ್ಪತ್ರೆಗೆ ಸಾಗಿಸುವಾಗ ಚೂರಿಯ ಇರಿತದಿಂದ ತೀವ್ರ ರಕ್ತಸ್ರಾವ ಆಗಿತ್ತು. ಆದುದರಿಂದ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ ಮಧ್ಯೆ ಗಾಂಜಾ ಸೇವನೆಯ ಮತ್ತು ಮಾರಾಟದ ಬಗ್ಗೆ ಗುಸು ಗುಸು ಎದ್ದಿದೆ. ಎರಡೂ ತಂಡಗಳೂ ಗಾಂಜಾ ಸೇವನೆ/ಮಾರಾಟದಲ್ಲಿ ತೊಡಗಿಕೊಂಡವರು ಎಂದು ಗುಮಾನಿ ಇದೆ. ಇತ್ತೀಚಿಗೆ ಗಾಂಜಾ ಗಬ್ಬು ಕರಾವಳಿಯಲ್ಲಿ ಹಬ್ಬುತ್ತಿದೆ, ಇದಕ್ಕೆ ಕಡಿವಾಣ ಬೇಕು ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.