PSI ಅಕ್ರಮ : ADGP ಅಮೃತ್ ಪೌಲ್ ಅರೆಸ್ಟ್
ಬೆಂಗಳೂರು: ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಎಡಿಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ಎಡಿಜಿಪಿ ಅಮೃತ್ ಪೌಲ್‌ರನ್ನು ಬಂಧಿಸಿದ್ದಾರೆ.
ಅಮೃತ್ ಪೌಲ್ ವಿರುದ್ಧ ಸಾಕ್ಷ್ಯಾಧಾರ ಸಿಕ್ಕಿದ್ದರಿಂದ ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪಾಲ್ ಕಚೇರಿಯಲ್ಲೇ ಒಎಂಆರ್ ಶೀಟ್ ತಿದ್ದಲಾಗಿದೆ. ಯಾವೊಬ್ಬ ಅಧಿಕಾರಿಯನ್ನೂ ಬಿಡದಂತೆ ಸೂಚಿಸಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದೇವೆ. ಸಿಐಡಿ ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಅಮೃತ್ ಪೌಲ್ ಅವರು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಸಮಯದಲ್ಲಿ ಪಿಎಸ್‌ಐ ಅಕ್ರಮ ನಡೆದಿತ್ತು. ಅಕ್ರಮ ಹಗರಣದಲ್ಲಿ ಅಮೃತ್ ಪೌಲ್ ಹೆಸರು ಕೂಡಾ ಕೇಳಿಬಂದಿತ್ತು. ಈ ಬಗ್ಗೆ ಅವರು ಸಿಐಡಿ ತನಿಖೆಗೂ ಹಾಜರಾಗಿದ್ದರು. ಇಂದು ನಾಲ್ಕನೇ ಬಾರಿಗೆ ಅವರು ತನಿಖೆಗೆ ಹಾಜರಾರಾದ ಸಮಯದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಸಿಐಡಿ ಪೊಲೀಸರು ಎಡಿಜಿಪಿ ಅಮೃತ್ ಪಾಲ್‌ರನ್ನು ಬಂಧಿಸಿ ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಯಲಿದೆ.
ಪೌಲ್ ಪಾತ್ರ : ಅಮೃತ್ ಪೌಲ್ ಈ ಹಿಂದೆ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದರು. ಇವರ ನೇತೃತ್ವದಲ್ಲಿ 2021ರ ಅಕ್ಟೋಬರ್‌ನಲ್ಲಿ 92 ಕೇಂದ್ರಗಳಲ್ಲಿ 545 ಪಿಎಸ್‌ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆದಿತ್ತು. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡ ಬಳಿಕ ಪರೀಕ್ಷೆಯಲ್ಲಿ ಅಕ್ರಮದ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಪೂರಕವಾಗಿ ಕೆಲ ಸಾಕ್ಷ್ಯಗಳು ಲಭ್ಯವಾಗಿದ್ದವು. ಹೀಗಾಗಿ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಸಿಐಡಿ ತನಿಖೆ ವೇಳೆ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳು, ಏಜೆಂಟರು, ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಸಿಕ್ಕಿಬಿದ್ದಿದ್ದರು. ನೇಮಕಾತಿ ವಿಭಾಗದ ಅಧಿಕಾರಿಗಳು ಅಕ್ರಮದಲ್ಲಿ ಕೈಜೋಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆ ವಿಭಾಗದ ಹಿಂದಿನ ಮುಖ್ಯಸ್ಥರಾದ ಅಮೃತ್ ಪೌಲ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲಾಗಿತ್ತು.