ಇನ್ಮುಂದೆ ಈ ಬಸ್ ಗಳಲ್ಲಿ ಇರುವುದಿಲ್ಲ ಕಂಡಕ್ಟರ್!!
ಬೆಂಗಳೂರು: ಇನ್ನು ಮುಂದೆ ಬಿಎಂಟಿಸಿ ಬಸ್‌ಗಳಲ್ಲಿ ಕಂಡಕ್ಟರ್ ಇರುವುದಿಲ್ಲ. ಬದಲಾಗಿ ಡಿಜಿಟಲ್ ಮೂಲಕವೇ ಎಲ್ಲಾ ಟಿಕೆಟ್ ಕಲೆಕ್ಷನ್ ಮಾಡುವ ವ್ಯವಸ್ಥೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜಾರಿಗೆ ತಂದಿದೆ.
ಬಿಎಂಟಿಸಿ ನಷ್ಟದ ಸುಳಿಯಲ್ಲಿ ಸಿಲುಕಿದ್ದು, ಹೀಗಾಗಿ ಈ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಸದ್ಯ ಬಸ್ ರಸ್ತೆಗಿಳಿಸೋದೇ ಕಷ್ಟ ಅನ್ನೋ ಪರಿಸ್ಥಿತಿಗೆ ತಲುಪಿರುವ ನಿಗಮ, ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿದೆ. ಕ್ಯೂ ಆರ್ ಕೋಡ್, ಕಾಮನ್ ಮೊಬಿಲಿಟಿ ಕಾರ್ಡ್ ಮೂಲಕ ಟಿಕೆಟ್ ಕಲೆಕ್ಷನ್ ಮಾಡುವ ಪ್ಲ್ಯಾನ್ ರೂಪಿಸಲಾಗುತ್ತಿದೆ. ಕೇವಲ ಡ್ರೈವರ್‌ನಿಂದ ಮಾತ್ರ ಬಸ್ ನಿರ್ವಹಿಸಲು ತೀರ್ಮಾನ ಮಾಡಲಾಗಿದೆ.
ಇನ್ನು ಕಂಡೆಕ್ಟರ್ ಕೆಲಸ ಮಾಡುತ್ತಿರುವವರನ್ನು ಡ್ರೈವರ್ ಕಂ ಕಂಡಕ್ಟರ್ಸ್‌ಗಳಾಗಿ ನೇಮಿಸಲು ಯೋಜನೆ ಮಾಡಲಾಗುತ್ತಿದೆ. ಈಗಾಗಲೇ ನಗರದ ಹಲವೆಡೆ ಚಾಲಕರ ಕೊರತೆಯಿಂದ ಹಲವು ಬಸ್ ಲೈನ್ ರದ್ದು ಮಾಡಲಾಗಿದೆ. ಇದರ ಜೊತೆಗೆ ಸಿಬ್ಬಂದಿ ಸಂಬಳದ ಹೊರೆಯನ್ನ ಅರ್ಧಕ್ಕೆ ಇಳಿಸುವ ಸಾಧ್ಯತೆ ಇದೆ. ಇನ್ನು ಈ ನಿರ್ಧಾರಕ್ಕೆ ಬಿಎಂಟಿಸಿ ನೌಕರರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಯೋಜನೆ ಜಾರಿಗೆ ತಂದರೆ ಬಿಎಂಟಿಸಿಯನ್ನೇ ನಂಬಿಕೊಂಡು ಜೀವನ ನಡೆಸುವವರ ಸ್ಥಿತಿ ಬೀದಿಗೆ ಬರುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.