ಮಂಗಳೂರು: ಮದ್ರಸಾದಿಂದ ಮರಳುತ್ತಿದ್ದ ಬಾಲಕನಿಗೆ ಕೇಸರಿ ಶಾಲು ಧರಿಸಿದ ವ್ಯಕ್ತಿಗಳಿಂದ ಹಲ್ಲೆಯ ಆರೋಪ : ತನಿಖೆಯ ಬಳಿಕ ಬಯಲಾಯಿತು ‘ಕಿಲಾಡಿ ‘ ಸತ್ಯ

ಮಂಗಳೂರು:ಮದ್ರಸಾದಿಂದ ಹಿಂದಿರುಗುವಾಗ ಕೇಸರಿ ಶಾಲು ಹಾಕಿಕೊಂಡಿದ್ದ ಇಬ್ಬರು ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾಲಕನೋರ್ವ ಆರೋಪ ಮಾಡಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಹರಡಲು ಪ್ರಯತ್ನಿಸಿದ ಘಟನೆಯೊಂದು ಕೃಷ್ಣಾಪುರ ಕಾಟಿಪಳ್ಳದಲ್ಲಿ ನಡೆದಿದ್ದು, ಪೊಲೀಸರ ಕ್ಷಿಪ್ರ ತನಿಖೆಯ ಬಳಿಕ ಪ್ರಕರಣದ ಸತ್ಯಾಸತ್ಯತೆ ಹೊರಬಿದಿದ್ದು, ಆ ಕೋಮು ಸಂಘರ್ಷ ಮಾಡುವ ಕಿಡಿಗೇಡಿಗಳ ಪ್ರಯತ್ನಕ್ಕೆ ತಡೆಬಿದ್ದಿದೆ.

ಘಟನೆ ವಿವರ:ಸೋಮವಾರ ಸಂಜೆ ಮದ್ರಸಕ್ಕೆ ತೆರಳಿ ಹಿಂದಿರುಗುತ್ತಿದ್ದ 13 ವರ್ಷದ ಬಾಲಕನೋರ್ವ ಕೇಸರಿ ಶಾಲು ಹಾಕಿದ ವ್ಯಕ್ತಿಗಳು ಹಲ್ಲೆ ನಡೆಸಿ,ಬಟ್ಟೆ ಹರಿದುಹಾಕಿದ್ದಾರ್ ಎಂದು ಆರೋಪಿಸಿದ್ದು ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಹರಡುವ ಬರಹಗಳು ಹರಿದಾಡಿ ,ಆಕ್ರೋಶ ವ್ಯಕ್ತವಾಗಿತ್ತು.ಕೂಡಲೇ ವಿಚಾರಣೆ ಪ್ರಾರಂಭಿಸಿದ ಪೊಲೀಸರು ನಗರದ ಎಲ್ಲಾ ಸಿಸಿ ಟಿವಿಗಳನ್ನು ಪರಿಶೀಲಿಸಿದ್ದು,ಯಾವುದೇ ಸುಳಿವು ಪತ್ತೆಯಾಗದ ಕಾರಣ ಬಾಲಕನನ್ನು ಹೆತ್ತವರ ಸಮ್ಮುಖದಲ್ಲಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಸತ್ಯಾಸತ್ಯತೆ ಹೊರಬಿದ್ದಿದೆ.

ನೋಡಲು ಕಪ್ಪಾಗಿದ್ದೇನೆ,ಎಷ್ಟು ಓದಿದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ ಎನ್ನುವ ಕಾರಣಕ್ಕೆ ಬಾಲಕ ಈ ರೀತಿಯ ಕೃತ್ಯ ಎಸಗಿದ್ದು, ತಾನೇ ತನ್ನ ಅಂಗಿಯನ್ನು ಹರಿದುಕೊಂಡು ಹಲ್ಲೆಯ ಆರೋಪ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಬಾಲಕನ ಹೇಳಿಕೆಯನ್ನು ಮದ್ರಸ ಶಿಕ್ಷಕರ,ಹೆತ್ತವರ ಹಾಗೂ ವೈದ್ಯರ ಸಮ್ಮುಖದಲ್ಲೇ ಪಡೆದುಕೊಂಡಿದ್ದು,ಆತನ ಆರೋಪ ಸುಳ್ಳು ಎನ್ನುವುದು ತನಿಖೆಯಲ್ಲಿ ಬಯಲಾಗಿದೆ ಎಂದಿದ್ದಾರೆ.

ಸದ್ಯ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದ ಬಾಲಕನ ಆರೋಪ ಸತ್ಯಾಸತ್ಯತೆ ಪೊಲೀಸರ ತನಿಖೆಯ ಬಳಿಕ ಬಯಲಾಗಿದೆ.

Leave A Reply

Your email address will not be published.