ಧೋನಿ ಮಂಡಿನೋವಿಗೆ ಕೇವಲ 40 ರೂಪಾಯಿಯ ಹಳ್ಳಿ ವೈದ್ಯರ ಟ್ರೀಟ್ಮೆಂಟ್
ಐಪಿಎಲ್ ಸೀಸನ್ 15 ಬಳಿಕ ಎಂಎಸ್ ಧೋನಿ ತಮ್ಮ ಹುಟ್ಟೂರು ರಾಂಚಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಹಳೆಯ ಸ್ನೇಹಿತರೊಂದಿಗೆ ಕಾಣಿಸಿಕೊಂಡಿದ್ದ ಧೋನಿ, ಇದೀಗ ಚಿಕಿತ್ಸೆ ಪಡೆಯುತ್ತಿರುವ ವಿಚಾರದಿಂದ ಸುದ್ದಿಗೆ ಬಂದಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಮೊಣಕಾಲಿನ ನೋವಿನ ಸಮಸ್ಯೆಯಿಂದ ಧೋನಿ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಾಣಲು ಯಾವುದೇ ದೊಡ್ಡ ವೈದ್ಯರು ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬದಲು ಸಾಮಾನ್ಯ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ವಿಶೇಷ.
ಮೊಣಕಾಲು ನೋವಿನ ಚಿಕಿತ್ಸೆಗಾಗಿ ಧೋನಿ ಪ್ರತಿ 4 ದಿನಗಳಿಗೊಮ್ಮೆ ಹಳ್ಳಿ ವೈದ್ಯರನ್ನು ಭೇಟಿ ಮಾಡುತ್ತಿದ್ದಾರೆ. ವಿಶೇಷ ಎಂದರೆ ಆ ವೈದ್ಯರು ಧೋನಿಯ ಚಿಕಿತ್ಸೆಗೆ ನಿಗದಿಪಡಿಸಿರುವ ಮೊತ್ತ ಕೇವಲ 40 ರೂ. ಮಾತ್ರ. ಅಂದರೆ 40 ರೂ. ವೈದ್ಯ ಎಂದೇ ಖ್ಯಾತಿ ಪಡೆದಿರುವ ವೈದ್ಯರು, ಕೋಟ್ಯಾಧಿಪತಿ ಧೋನಿ ಅವರಿಂದಲೂ ಅಷ್ಟೇ ಶುಲ್ಕ ಪಡೆಯುತ್ತಿದ್ದಾರೆ.
ರಾಂಚಿಯಿಂದ ಸುಮಾರು 70 ಕಿಮೀ ದೂರದಲ್ಲಿರುವ ಲಪುಂಗ್ನ ಕಟಿಂಗ್ಕೆಲಾದ ಬಾಬಾ ಗಲ್ಲಾಲಿ ಧಾಮ್ನಲ್ಲಿರುವ ವಂದನ್ ಸಿಂಗ್ ಖೇರ್ವಾರ್ ಅವರಿಂದ ಧೋನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 1 ತಿಂಗಳಿನಿಂದ ಧೋನಿ ಪ್ರತಿ 4 ದಿನಗಳಿಗೊಮ್ಮೆ ತಮ್ಮ ಬಳಿಗೆ ಬರುತ್ತಾರೆ. ಅಲ್ಲದೆ ಗಿಡಮೂಲಿಕೆ ಔಷಧಿಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿರಬಹುದು. ಆದರೆ ಐಪಿಎಲ್ನಲ್ಲಿ ಇನ್ನೂ ಕೂಡ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಐಪಿಎಲ್ 2023 ರ ಮೊದಲು ತಮ್ಮ ಮೊಣಕಾಲಿನ ನೋವಿನ ಸಮಸ್ಯೆಯನ್ನು ಹೋಗಲಾಡಿಸಲು ಹಳ್ಳಿ ವೈದ್ಯರ ಮೊರೆ ಹೋಗಿದ್ದಾರೆ. ಅದು ಕೂಡ 40 ರೂ. ನೀಡುವ ಮೂಲಕ ಎಂಬುದು ವಿಶೇಷ.