ಬೆಳ್ತಂಗಡಿ: ಶಿರ್ಲಾಲು ಗ್ರಾಮದಲ್ಲಿ ಸುರಿದ ಕೆಂಪು ಮಳೆ!
ಬೆಳ್ತಂಗಡಿ : ತಾಲೂಕಿನ ಶಿರ್ಲಾಲು ಗ್ರಾಮದ ವ್ಯಕ್ತಿಯೋರ್ವರ ಮನೆಯಲ್ಲಿ ಅಪರೂಪದ ವೈಚಿತ್ರ್ಯ ವೊಂದು ನಡೆದಿದೆ. ಅಲ್ಲಿ ಕೆಂಪು ಮಳೆಯಾದ ಘಟನೆ ನಡೆದಿದೆ.
ಶಿರ್ಲಾಲು ಬಳ್ಳಿದಡ್ಡ ಮನೆಯ ಸೂರ್ಯನಾರಾಯಣ ಭಟ್ ಎಂಬುವವರ ಮನೆಯಲ್ಲಿ ಈ ವಿಚಿತ್ರ ರಕ್ತದ ಮಳೆ ಸುರಿದಿದ್ದು, ಸಾರ್ವಜನಿಕರಿಗೆ ಆತಂಕ ಉಂಟಾಗಿದೆ.
ಮನೆಗೆ ಅಳವಡಿಸಲಾಗಿದ್ದ ಮೇಲ್ಟಾವಣಿಯಿಂದ ಹರಿದು ಬಂದ ಮಳೆ ನೀರು ಬಕೆಟ್, ಡ್ರಮ್ ಗಳಲ್ಲಿ ಶೇಖರಣೆಯಾಗಿದ್ದು, ಈ ನೀರು ಕೆಂಪು ಬಣ್ಣದಲ್ಲಿ ತುಂಬಿಕೊಂಡಿದೆ. ಈ ನೀರನ್ನು ಈಗಾಗಲೇ ಸಂಶೋಧನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮನೆಯ ಯಜಮಾನ ಸೂರ್ಯನಾರಾಯಣ ಭಟ್ ತಿಳಿಸಿದ್ದಾರೆ.
ರಕ್ತದ ಮಳೆ ಬಂತು ಅಂತ ಜನ ಮಾತಾಡ್ತಿದ್ದಾರೆ. ಸುಳ್ಯದಲ್ಲಿ ಭೂಕಂಪ, ಇಲ್ಲಿ ನೋಡಿದರೆ, ರಕ್ತದ ಮಳೆ ಆಗ್ತಿದೆ. ಏನಾಗ್ತಿದೆ ಅನ್ನುವ ಊಹಾಪೋಹ ನಡೀತಿದೆ.
ಹಲವು ಬಣ್ಣಗಳಲ್ಲಿ ಮಳೆ ಕಂಡುಬರುವುದು ಅಪರೂಪ. ಕೆಂಪು ಬಣ್ಣದ ಮಳೆ, ಏಷ್ಯಾ ಖಂಡದಲ್ಲಿ, ಮುಖ್ಯವಾಗಿ ಭಾರತದಲ್ಲಿ ಈ ಹಿಂದೆಯೂ ರಿಪೋರ್ಟ್ ಆಗಿತ್ತು. ಆಕಾಶಕಾಯಗಳ ಸಿಡಿತದ ತುಂಡುಗಳು ಮಳೆನೀರಿನಿಂದ ತೋಯಲ್ಪಟ್ಟು, ಆ ಬಣ್ಣ ಮಳೆಗೆ ಬರುತ್ತವೆ ಎನ್ನುವ ವಿಚಾರ ಪ್ರಚಲಿತದಲ್ಲಿದೆ. ಅಲ್ಲದೆ ಕೆಲವು ಫಂಗಸ್ ಗಳು ಕೂಡಾ ಮಳೆಗೆ ಕೆಂಬಣ್ಣವನ್ನು ನೀಡುತ್ತವೆಯಂತೆ.
ಕೇರಳದಲ್ಲಿ ಕೆಲವರ್ಷಗಳ ಹಿಂದೆ ರೆಡ್ ರೈನ್ ಸುರಿದಿತ್ತು. 2001 ರಲ್ಲಿ ಕೇರಳದಲ್ಲಿ ನಡೆದ ಬ್ಲಡ್ ರೈನ್ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಆಕಾಶಕಾಯಗಳ ಚೂರಿನಿಂದ ನೀರಿಗೆ ಬಣ್ಣ ಬಂದಿದೆ ಎನ್ನಲಾಗುತ್ತಿತ್ತು. ಕೊನೆಗೆ ಇನ್ನಷ್ಟು ಅಧ್ಯಯನ ನಡೆದು, ಅದು ಆಲ್ಗೆ ( ಪಾಚಿ ಜಾತಿಯ ) ಉಂಟಾದ ಬಣ್ಣ ಎಂದು ನಿರ್ಧರಿಸಲಾಯಿತು.
ಮಳೆ ನೀರು ಕೆಂಪು ಬಣ್ಣವಾಗಿ ಇರಲು ನಿಖರ ಕಾರಣ ಏನೆಂಬುದು ಲ್ಯಾಬ್ ವರದಿ ಬಳಿಕವಷ್ಟೇ ತಿಳಿದು ಬರಬೇಕಿದೆ.