ಉಡುಪಿ:”ಅಮ್ಮಾ ನಾನು ಅಪಹರಣವಾಗಿದ್ದೇನೆ, ಕೂಡಲೇ 5ಲಕ್ಷ ಹಣ ಹೊಂದಿಸಿ”!! ನಸುಕಿನ ಜಾವ ಭಯದಿಂದ ಕರೆ ಮಾಡಿದ ಯುವಕನನ್ನು ಹುಡುಕಲು ಹೋದ ಪೊಲೀಸರಿಗೆ ಕಾದಿತ್ತು ಶಾಕ್

ಉಡುಪಿ:”ತನ್ನನ್ನು ಅಪಹರಣ ಮಾಡಿದ್ದಾರೆ, ಕೂಡಲೇ ಐದು ಲಕ್ಷ ಹಣ ಕೊಡದಿದ್ದರೆ ಕೊಂದುಹಾಕುತ್ತಂತೆ ಅಮ್ಮ” ಎಂದು ಪೋಷಕರನ್ನು ನಂಬಿಸಿ ಹಣಕ್ಕೆ ಬೇಡಿಕೆ ಇಟ್ಟ ಪುತ್ರನೊಬ್ಬನ ನಿಜಬಣ್ಣ ಬಯಲಾಗಿದ್ದು, ಆತನನ್ನು ಹುಡುಕಲು ಹೋದ ಪೊಲೀಸರು ಶಾಕ್ ಆದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.

 

ಹೀಗೆ ಪೋಷಕರ ಸಹಿತ ಪೊಲೀಸರನ್ನು ನಂಬಿಸಿದ ಯುವಕನ್ನು ವರುಣ್ ನಾಯಕ್(25)ಎಂದು ಗುರುತಿಸಲಾಗಿದೆ.

ಘಟನೆ ವಿವರ:ಜೂನ್ 26ರ ನಸುಕಿನ ಜಾವ ತನ್ನ ಪೋಷಕರಿಗೆ ಕರೆ ಮಾಡಿದ ವರುಣ್, ತನ್ನನ್ನು ಅಪಹರಿಸಿದ್ದಾರೆ, ಕೂಡಲೇ 5ಲಕ್ಷ ಹಣ ತಂದುಕೊಟ್ಟು ಬಿಡಿಸಿಕೊಂಡು ಹೋಗಿ ಎಂದು ಗಾಬರಿಯಿಂದ ಮಾತನಾಡಿದ್ದ. ಈತನ ಮಾತು ಕೇಳಿ ಪೋಷಕರು ಗಾಬರಿಗೊಂಡಿದ್ದು, ಭಯದಿಂದ ಮುಂಜಾನೆಯೇ ಎಲ್ಲರಿಗೂ ವಿಷಯ ತಿಳಿಸಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಧಿಕಾರಿಗಳ ಸೂಚನೆಯಂತೆ ಯುವಕನ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಆತನ ಮೊಬೈಲ್ ಲೊಕೇಶನ್ ಗೋವಾದಲ್ಲಿರುವುದು ಗೊತ್ತಾಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿಗಳ ತಂಡ ಅತ್ತ ತೆರಳಿತ್ತು.

ಗೋವಾದಲ್ಲಿ ಪೊಲೀಸರು ಲೊಕೇಶನ್ ಪರಿಶೀಲಿಸಿ ಆ ಸ್ಥಳಕ್ಕೆ ತೆರಳಿದಾಗ ಅಲ್ಲಿ ಅಚ್ಚರಿ ಕಾದಿತ್ತು. ಅಪಹರಿಸಿದ್ದಾರೆ ಎಂದು ಭಯ ಹುಟ್ಟಿಸಿದ್ದ ಯುವಕ ತನ್ನ ಗೆಳೆಯರೊಂದಿಗೆ ಸೇರಿ ಮೋಜು ಮಸ್ತಿಯಲ್ಲಿ ತೊಡಗಿರುವುದು ಕಂಡುಬಂದಿತ್ತು. ಬಳಿಕ ಆತನನ್ನು ಅಲ್ಲಿಂದ ವಶಕ್ಕೆ ಪಡೆದು, ಉಡುಪಿಗೆ ಕರೆತಂದು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದ್ದು. ಪೊಲೀಸರನ್ನು ತಮಾಷೆಗೆ ಬಳಸಿಕೊಂಡ ಯುವಕ ಹಾಗೂ ಆತನ ಪೋಷಕರ ವಿರುದ್ಧ ಆಕ್ರೋಶವು ವ್ಯಕ್ತವಾಗಿತ್ತು.

Leave A Reply

Your email address will not be published.