ನೇರಳಕಟ್ಟೆ : ಮಹಿಳೆಯ ಕೊಲೆ ಪ್ರಕರಣ ಕಾರಣ ಬಹಿರಂಗ | ಈ ವಿಚಾರಕ್ಕಾಗಿಯೇ ನಡು ರಸ್ತೆಯಲ್ಲಿಯೇ ಕೊಲೆ ನಡೆಸಿದ್ದ !
ಪುತ್ತೂರು : ಬಂಟ್ವಾಳ ತಾಲೂಕು ನೆಟ್ಟ ಮುನ್ನೂರು ಗ್ರಾಮದ ನೇರಳಕಟ್ಟೆ ಗಣೇಶ್ ನಗರದಲ್ಲಿ ಜೂ.27ರಂದು ನಡೆದಿದ್ದ ವಿವಾಹಿತ ಮಹಿಳೆ ಶಕುಂತಳಾ ಅವರ ಕೊಲೆ ಪೂರ್ವದ್ವೇಷದಿಂದ ನಡೆದಿದೆ. ತನ್ನೊಂದಿಗೆ ಒಡನಾಟ ಹೊಂದಿದ್ದರೂ ಟಯರ್ ಅಂಗಡಿಯಾತನೋರ್ವನೊಂದಿಗೆ ಸಖ್ಯ ಬೆಳೆಸಿದ್ದ ಸಿಟ್ಟಿನಿಂದ ಶಕುಂತಳಾರವರನ್ನು ಕೊಲೆಗೈದಿರುವುದಾಗಿಯೂ ಆರೋಪಿ ಶ್ರೀಧರ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.
ಮೃತ ಶಕುಂತಳಾ ಅನಂತಾಡಿ ದೇವಿನಗರ ನಿವಾಸಿ ಸಂಜೀವ ಅವರ ಪತ್ನಿ ಶಕುಂತಳಾ(35ವ. ) ರವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣದ ಆರೋಪಿಯಾಗಿರುವ ಆಟೋ ಚಾಲಕ, ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಕಮನಾಜೆ ನಿವಾಸಿ ತುಕ್ರಪ್ಪರವರ ಪುತ್ರ ಅವಿವಾಹಿತನಾಗಿರುವ ಶ್ರೀಧರ ಅವರನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಐದು ವರುಷಗಳಿಂದ ಒಡನಾಟ: ಆರೋಪಿ ಶ್ರೀಧರ ಹಾಗೂ ಮೃತ ಶಕುಂತಳಾರವರು ಕಳೆದ ಐದು ವರುಷಗಳಿಂದ ಪರಿಚಿತರಾಗಿದ್ದರು. ಶಕುಂತಳಾರವರು ವಿವಾಹಿತರಾಗಿದ್ದರೂ ಅವರಿಬ್ಬರ ಮಧ್ಯೆ ಉತ್ತಮ ಬಾಂಧವ್ಯ ಇತ್ತು. ಶಕುಂತಳಾರವರು ಆರಂಭದಲ್ಲಿ ಪುತ್ತೂರಿನ ಕೆಲವು ಹೊಟೇಲ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಶ್ರೀಧರನ ಆಟೋದಲ್ಲಿಯೇ ಬಂದು ಹೋಗುತ್ತಿದ್ದರು. ವರುಷಗಳ ಹಿಂದೆ ಆಕೆ ದ್ವಿಚಕ್ರ ವಾಹನ ಖರೀದಿಸಿದ ಬಳಿಕ ಆಕೆ ಒಬ್ಬಂಟಿಯಾಗಿ ದ್ವಿಚಕ್ರ ವಾಹನದಲ್ಲಿಯೇ ಹೊಟೇಲ್‌ಗೆ ಹೋಗಿ ಬರುತ್ತಿದ್ದರು.
ಹೊಟೇಲ್ ಉದ್ಯಮ ಪ್ರಾರಂಭಿಸಲು ಹಣಕಾಸು ವ್ಯವಸ್ಥೆ ಮಾಡಿದ್ದ ಶ್ರೀಧರ
ಶಕುಂತಳಾರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಹಿನ್ನೆಲೆಯಲ್ಲಿ ಸ್ವಂತ ಹೊಟೇಲ್ ತೆರೆಯುವಂತೆ ಶ್ರೀಧರ್ ಆಕೆಗೆ ಸಲಹೆ ನೀಡಿದ್ದ ಮಾತ್ರವಲ್ಲದೆ ಬೊಳುವಾರಿನಲ್ಲಿ ಹೊಟೇಲ್ ಪ್ರಾರಂಭಿಸುವಾಗ ಶಕುಂತಳಾರಿಗೆ ಆತ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿರುವುದಾಗಿ ವಿಚಾರಣೆ ವೇಳೆ ಪೊಲೀಸರಲ್ಲಿ ತಿಳಿಸಿರುವುದಾಗಿ ಮಾಹಿತಿ ಲಭಿಸಿದೆ.
ಶಕುಂತಳಾರಿಗೆ ಟಯರ್ ಅಂಗಡಿಯಾತನೊ೦ದಿಗೆ
ಸ್ನೇಹಾಚಾರ-ಆರೋಪಿಯ ಕೋಪಕ್ಕೆ ಕಾರಣ
ಶ್ರೀಧರ್ ಜೊತೆ ಚೆನ್ನಾಗಿಯೇ ಇದ್ದ ಶಕುಂತಳಾರಿಗೆ, ತನ್ನ ಹೊಟೇಲ್ ಗೆ ಬರುತ್ತಿದ್ದ ಪುತ್ತೂರಿನ ಟಯರ್ ಅಂಗಡಿಯೊಂದರ ವ್ಯಕ್ತಿಯ ಪರಿಚಯವಾಗಿತ್ತು. ಬಳಿಕದ ದಿನಗಳಲ್ಲಿ ಅವರಿಬ್ಬರೂ ಅನ್ನೋನ್ಯವಾಗಿದ್ದರು. ಆದರೆ, ಆತನ ಸಖ್ಯ ಬೆಳೆಸದಂತೆ ಶಕುಂತಳಾಳಿಗೆ ಶ್ರೀಧರ ಎಚ್ಚರಿಕೆ ನೀಡಿದ್ದ. ಆದರೆ ಅದಕ್ಕೊಪ್ಪದ ಆಕೆ ಟಯರ್ ಅಂಗಡಿಯವನೊಂದಿಗಿನ ಸ್ನೇಹಾಚಾರವನ್ನು ಮುಂದುವರೆಸಿದ್ದಳು. ಈ ವಿಚಾರ ಅವರಿಬ್ಬರೊಳಗೆ ಆಗಾಗ್ಗೆ ಗಲಾಟೆಗೆ ಕಾರಣವಾಗಿತ್ತು ಎನ್ನುವುದು ತನಿಖೆ ವೇಳೆ ಬಹಿರಂಗಗೊಂಡಿರುವುದಾಗಿ
ಪೊಲಿಸರು ತಿಳಿಸಿದ್ದಾರೆ.
ಹೊಸ ಚಾಕು ಖರೀದಿಸಿದ್ದ ಆರೋಪಿ: ಟಯರ್ ಅಂಗಡಿಯ ವ್ಯಕ್ತಿ ಶಕುಂತಳಾರವರಿಗೆ ಪರಿಚಯವಾದ ಬಳಿಕ ಆಕೆ ಶ್ರೀಧರರನ್ನು ಅಷ್ಟಾಗಿ ಹಚ್ಚಿಕೊಳ್ಳುತ್ತಿರಲಿಲ್ಲ. ಮಾತ್ರವಲ್ಲದೆ ಇದೇ ವಿಚಾರಕ್ಕೆ ಸಂಬಂಧಿಸಿ ಅವರಿಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಜೂ.21ರಂದು ಮಧ್ಯಾಹ್ನ ಶ್ರೀಧರ್ ಕೊಂಬೆಟ್ಟಿನಲ್ಲಿರುವ ಶಕುಂತಳಾರವರ ಹೊಟೇಲ್ ಗೆ ತೆರಳಿದ್ದ ವೇಳೆ ಆಕೆ ಅಲ್ಲಿರಲಿಲ್ಲ. ಬಳಿಕ ಟಯರ್ ಅಂಗಡಿಯಲ್ಲಿ ಹೋಗಿ ನೋಡಿದಾಗ ಆ ವ್ಯಕ್ತಿಯೂ ಇಲ್ಲದಿರುವುದನ್ನು ಗಮನಿಸಿದ್ದ ಶ್ರೀಧರ್ ಕೆಂಡಾಮಂಡಲರಾಗಿದ್ದರು, ಅವರಿಬ್ಬರೂ ಜೊತೆಯಾಗಿ ಹೋಗಿರಬೇಕೆಂದು ಸಂಶಯಗೊಂಡಿದ್ದ ಶ್ರೀಧರ ನೇರವಾಗಿ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಅಂಗಡಿಯೊಂದರಿಂದ ಹೊಸ ಚಾಕೊಂದನ್ನು ಖರೀದಿ ಮಾಡಿ ಅನಂತಾಡಿ ಕಡೆಗೆ ತೆರಳಿದ. ಈ ವೇಳೆ ಟಯರ್ ಅಂಗಡಿಯ ವ್ಯಕ್ತಿ ಮಾಣಿ ಕಡೆಯಿಂದ ಪುತ್ತೂರು ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಬರುತ್ತಿರುವುದನ್ನು ಗಮನಿಸಿದ್ದ ಶ್ರೀಧರ್ ನೇರಳಕಟ್ಟೆ ಸಮೀಪ ಆತನನ್ನು ಕಡೆದು ನಿಲ್ಲಿಸಿ ವಿಚಾರಿಸಿದ್ದ. ಈ ವೇಳೆ ಅವರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದನ್ನು ಕಂಡು ಸ್ಥಳೀಯರು ಸೇರುತ್ತಿರುವುದನ್ನು ಗಮನಿಸಿ ಅವರಿಬ್ಬರು ಅಲ್ಲಿಂದ ತೆರಳಿದ್ದರು.
ಅದಾದ ಅಲ್ಪ ಹೊತ್ತಿನಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಬಂದಿದ್ದ ಶಕುಂತಳಾರವರು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಸಮೀಪ ತಲುಪುತಿದ್ದಂತೆ ಶ್ರೀಧರ್ ತನ್ನ ಆಟೋವನ್ನು ಆಕೆಯ ಸ್ಕೂಟರ್‌ಗೆ ಅಡ್ಡವಿಟ್ಟು ಆಕೆಯೊಂದಿಗೆ ಮಾತಿಗಿಳಿದ. ಈ ವೇಳೆ ಅವರೊಳಗೆ ಮಾತಿನ ಚಕಮಕಿ ನಡೆದು ಶ್ರೀಧರ ತಾನು ತಂದಿದ್ದ ಹೊಸ ಚಾಕುವಿನಿಂದ ಶಕುಂತಳಾಗೆ ಇರಿದು ಪರಾರಿಯಾಗಿದ್ದ ವಿಚಾರ ತನಿಖೆ ವೇಳೆ ಬಹಿರಂಗವಾಗಿದೆ.
ಕೆಲ ತಿಂಗಳ ಹಿಂದೆ ಚಾಕುವಿನೊಂದಿಗೆ ಶಕುಂತಳಾರ ಮನೆಗೆ ತೆರಳಿದ್ದ ಆರೋಪಿ
ಶಕುಂತಳಾ ಜೊತೆ ಟಯರ್ ಅಂಗಡಿಯಾತ ನಂಟು ಹೊಂದಿದ್ದ ವಿಚಾರದಲ್ಲಿ ಶಕುಂತಳಾ ಹಾಗೂ ಆರೋಪಿ ಶ್ರೀಧರ್ ಮಧ್ಯೆ ಪದೇಪದೇ ಜಗಳವಾಗುತ್ತಿತ್ತು. ಇದೇ ವಿಚಾರವಾಗಿ ಕೆಲತಿಂಗಳ ಹಿಂದೆಯೊಮ್ಮೆ ಚಾಕುವಿನೊಂದಿಗೆ ಆಕೆಯ ಮನೆಗೆ ತೆರಳಿದ್ದ ಆರೋಪಿ ಆಕೆಗೆ ಬೆದರಿಕೆ ಒಡ್ಡಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಕುಂತಳಾರವರು ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ಸಂಬಂಧ ಶ್ರೀಧರರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಬಿಡಲಾಗಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ.
ಶ್ರೀಧರ ಕೊಂಬಿಲದಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ಶ್ರೀಧರ ಚಿಕ್ಕಂದಿನಿಂದಲೇ ಅನಂತಾಡಿ ಗ್ರಾಮದ ಕೊಂಬಿಲದಲ್ಲಿರುವ ತನ್ನ ಅಜ್ಜಿಮನೆಯಿಂದಲೇ ಈ ಶಾಲೆಗೆ ಹೋಗುತ್ತಿದ್ದ. ಆ ಬಳಿಕ ಅವರು ತಮ್ಮ ಮನೆಯನ್ನು ಗೋಳಿಕಟ್ಟೆಗೆ ಸ್ಥಳಾಂತರಿಸಿದ್ದರು. ಇತ್ತೀಚಿನವರೆಗೂ ಆತ ಗೋಳಿಕಟ್ಟೆಯ ಅಜ್ಜಿ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.
ಪುತ್ತೂರಿನಲ್ಲಿ ರಿಕ್ಷಾ ಬಾಡಿಗೆ: ಆರೋಪಿ ಶ್ರೀಧರ ಬೆಟ್ಟಂಪಾಡಿಯ ವ್ಯಕ್ತಿಯೋರ್ವರಿಂದ ಆಟೋ ರಿಕ್ಷಾವನ್ನು ಖರೀದಿಸಿ ಬಳಿಕ ಪುತ್ತೂರಿನಲ್ಲಿ ರಿಕ್ಷಾ ಬಾಡಿಗೆ ಮಾಡಿಕೊಂಡಿದ್ದ. ತನ್ನ ರಿಕ್ಷಾದಲ್ಲಿಯೇ ಅನಂತಾಡಿ ಗೋಳಿಕಟ್ಟೆಯಲ್ಲಿರುವ ಅಜ್ಜಿ ಮನೆಗೆ ಹೋಗಿ ಬರುತ್ತಿದ್ದ ಸಂದರ್ಭ ಆರಂಭದಲ್ಲಿ ಶಕುಂತಳಾ ಕೂಡಾ ಅದೇ ರಿಕ್ಷಾದಲ್ಲಿ ಪುತ್ತೂರಿಗೆ ಬರುತ್ತಿದ್ದರು. ಆರೋಪಿ ಶ್ರೀಧರ ಪುತ್ತೂರಿನ ಆದರ್ಶ ಆಸತ್ರೆಯ ಬಳಿಯ ರಿಕ್ಷಾ ಕ್ಯೂನಲ್ಲಿ ಚಾಲಕನಾಗಿದ್ದು, ಇತ್ತೀಚೆಗೆ ಅವನು ರಬ್ಬರ್ ಟ್ಯಾಪಿಂಗ್ ವೃತ್ತಿಯನ್ನೂ ಮಾಡುತ್ತಿದ್ದ.
ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ
ಬಂಧಿತ ಆರೋಪಿಯನ್ನು ಸುದೀರ್ಘ ವಿಚಾರಣೆಗೊಳಪಡಿಸಿದ್ದ ಪೊಲೀಸರಿಗೆ ಆತ ಕೆಲವೊಂದು ಮಹತ್ತರವಾದ ಸಂಗತಿಗಳನ್ನು ತಿಳಿಸಿದ್ದಾನೆ.
ವಿಚಾರಣೆ ಬಳಿಕ ವಿಟ್ಲ ಠಾಣಾ ಇನ್ಸ್‌ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ನೇರಳಕಟ್ಟೆಯ ಘಟನಾ ಸ್ಥಳ ಹಾಗೂ ಆತ ಚಾಕು ಖರೀಧಿಸಿದ್ದ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಅಂಗಡಿಗೆ ಕರೆದೊಯ್ದು ತನಿಖೆ ನಡೆಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಟಯರ್ ಅಂಗಡಿಯಾತ ನಾಪತ್ತೆ:
ಶಕುಂತಳಾರೊಂದಿಗೆ ನಂಟು ಹೊಂದಿದ್ದರೆನ್ನಲಾಗಿರುವ, ಪುತ್ತೂರಿನ ಟಯರ್ ಅಂಗಡಿಯಾತ ಘಟನೆ ಬಳಿಕ ನಾಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಘಟನೆ ಸಂಬಂಧ ಪೊಲೀಸರು ಟಯರ್ ಅಂಗಡಿಯಾತನನ್ನೂ ಪತ್ತೆ ಮಾಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಶಕುಂತಳಾ ರವರು ತನ್ನ ಸಹೋದರಿಯೊಂದಿಗೆ ಪುತ್ತೂರಿನ
ಬಂಟರ ಭವನದ ಬಳಿ ವಿನಾಯಕ ಮಿನಿ ಕ್ಯಾಂಟಿನ್’ ನಡೆಸುತ್ತಿದ್ದರು. ಮಧ್ಯಾಹ್ನ 2 ಗಂಟೆಯ ಬಳಿಕ ಅಲ್ಲಿಂದ ದೇವಿನಗರದ ಮನೆಗೆ ಬಂದಿದ್ದರು. ಆ ವೇಳೆ ಅವರ ಮೊಬೈಲ್‌ಗೆ ಯಾರದೋ ಕರೆ ಬಂದಿತ್ತು. ಅದರಲ್ಲಿ ಮಾತನಾಡಿ ಬಳಿಕ ಮೊಬೈಲ್ ಫೋನನ್ನು ಮನೆಯಲ್ಲೇ ಬಿಟ್ಟು ಈಗ ಬರುವುದಾಗಿ ತಿಳಿಸಿ ಮನೆಯಿಂದ ಹೊರಟು ತಮ್ಮ ದ್ವಿಚಕ್ರ ವಾಹನದಲ್ಲಿ ನೇರಳಕಟ್ಟೆ ಭಾಗಕ್ಕೆ ಬಂದಿದ್ದರು. ನೇರಳಕಟ್ಟೆಯ ಜನಪ್ರಿಯ ಹಾಲ್ ಸಮೀಪ ತಲುಪುತ್ತಿದ್ದಂತೆ ತನ್ನ ಆಟೋದಲ್ಲಿ ಬಂದಿದ್ದ ಆರೋಪಿ ಶ್ರೀಧರ್ ಆಕೆಯ ದ್ವಿಚಕ್ರ ವಾಹನದ ಬಳಿಯಲ್ಲಿಯೇ ಆಟೋವನ್ನು ನಿಲ್ಲಿಸಿದ್ದರು.
ಆ ಬಳಿಕ ಶಕುಂತಳಾ ಮತ್ತು ಶ್ರೀಧರ್ ಮಧ್ಯೆ ಅಲ್ಲಿ ಅಲ್ಪಹೊತ್ತು ಸಂಭಾಷಣೆ ನಡೆದಿತ್ತು. ಶ್ರೀಧರ್ ತನ್ನ ರಿಕ್ಷಾದ ಸೀಟಲ್ಲಿ ಕುಳಿತುಕೊಂಡಿದ್ದರೆ, ಶಕುಂತಳಾ ಅವರು ತನ್ನ ದ್ವಿಚಕ್ರ ವಾಹನದ ಸೀಟಲ್ಲಿಯೇ ಕುಳಿತುಕೊಂಡು ಮಾತನಾಡಿಕೊಂಡಿದ್ದರು. ಅವರೊಳಗಿನ ಅದ್ಯಾವುದೋ ವಿಚಾರದಲ್ಲಿ ಚರ್ಚೆ ನಡೆದು ಅದು ತಾರಕಕ್ಕೇರಿ ಶ್ರೀಧರ ತನ್ನ ಕೈಯಲ್ಲಿದ್ದ ಚೂರಿಯಿಂದ ಶಕುಂತಳಾರಿಗೆ ಯದ್ವಾತದ್ವಾ ತಿವಿದಿದ್ದ. ಇದರಿಂದಾಗಿ ತೀವ್ರ ಗಾಯಗೊಂಡಿದ್ದ ಶಕುಂತಳಾರವರು ತನ್ನ ದ್ವಿಚಕ್ರ ವಾಹನ ಸಮೇತ ನೆಲಕ್ಕುರುಳಿದರು. ಆ ದಾರಿಯಾಗಿ ಬರುತ್ತಿದ್ದ ಖಾಸಗಿ ಬಸ್ಸಿನ ಚಾಲಕರೋರ್ವರು ಶ್ರೀಧರ ಶಕುಂತಳಾ ನಡುವಿನ ಜಗಳವನ್ನು ದೂರದಿಂದ ಗಮನಿಸಿ ಅಲ್ಲಿಗೆ ಬರುತ್ತಿದ್ದಂತೆ ಆಟೋ ಸಹಿತ ಶ್ರೀಧರ ಪರಾರಿಯಾಗಿದ್ದ.
ಘಟನೆಯ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಸ್ಥಳಕ್ಕಾಗಮಿಸಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಕುಂತಳಾರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಬಳಿಕ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿತ್ತು.
ಜೂ.28ರಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ಮೃತದೇಹವನ್ನು ಆರಂಭದಲ್ಲಿ, ಅನಂತಾಡಿ ದೇವಿನಗರದಲ್ಲಿರುವ ಶಕುಂತಳಾರವರ ಪತಿ ಮನೆಗೆ ಕರೆತರಲಾಗಿದ್ದು, ಆ ಬಳಿಕ ಮಾಣಿಯ ಕಾಪಿಕಾಡು ಎಂಬಲ್ಲಿರುವ ಅವರ ತಾಯಿ ಮನೆಗೆ ಕೊಂಡೊಯ್ದು ಪುತ್ತೂರಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.