ಅಸಾವುದ್ದಿನ್ ಓವೈಸಿ ಗೆ ತೀವ್ರ ಮುಖಭಂಗ, ನಾಲ್ವರು ಎಐಎಂಐಎಂ ಶಾಸಕರು ಆರ್‌ಜೆಡಿ ಪಕ್ಷಕ್ಕೆ ಸೇರ್ಪಡೆ
ಪಾಟ್ನಾ: ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ನಾಲ್ವರು ಶಾಸಕರು ಇಂದು ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳಕ್ಕೆ ಸೇರಿದ್ದು, ಈ ಮೂಲಕ ಬಿಹಾರ ರಾಜಕೀಯದಲ್ಲಿ ಅಸಾದುದ್ದೀನ್ ಓವೈಸಿ ಪಕ್ಷಕ್ಕೆ ಭಾರೀ ಮುಖಭಂಗ ಉಂಟಾಗಿದೆ.
ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಓವೈಸಿ ಪಕ್ಷದ ನಾಲ್ವರು ಶಾಸಕರು ಆರ್‌ಜೆಡಿ ಸೇರಿರುವುದನ್ನು ಪುಷ್ಠಿಕರಿಸಿದ್ದಾರೆ. ‘ಬಿಹಾರದ ಐವರು ಎಐಎಂಐಎಂ ಶಾಸಕರ ಪೈಕಿ ನಾಲ್ವರು ಇಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ಬಿಹಾರ ವಿಧಾನಸಭೆಯಲ್ಲಿ ನಾವೇ ದೊಡ್ಡ ಪಕ್ಷ ‘ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ನಾಲ್ವರು ಶಾಸಕರ ಸೇರ್ಪಡೆಯಿಂದ ಬಿಹಾರದಲ್ಲಿ ಆರ್‌ಜೆಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆರ್ ಜೆಡಿಗೆ ಈ ನಾಲ್ವರು ಶಾಸಕರ ಆಗಮನದಿಂದ ಪಕ್ಷದ ಒಟ್ಟು ಸಂಖ್ಯೆ 79 ಆಗಲಿದೆ. ಇನ್ನು ಎರಡನೇ ಸ್ಥಾನದಲ್ಲಿ ಬಿಜೆಪಿ ಇರಲಿದ್ದು, ಅದರ ಒಟ್ಟು ಶಾಸಕರ ಸಂಖ್ಯೆ 77 ಇದೆ. ಈ ಬೆಳವಣಿಗೆಗಳ ಮಧ್ಯೆ ವಿರೋಧ ಪಕ್ಷದ ನಾಯಕರಾಗಿರುವ ತೇಜಸ್ವಿ ಯಾದವ್ ಇಂದು ಸುದ್ದಿಗೋಷ್ಠಿ ನಡೆಸಲಿದ್ದು, ಮುಂದಿನ ರಣತಂತ್ರಗಳ ಬಗ್ಗೆ ಮಾಹಿತಿ ಬಿಚ್ಚಿಡಲಿದ್ದಾರೆ.
ಎಐಎಂಐಎಂ ನವೆಂಬರ್ 2020 ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ 20 ಅಸೆಂಬ್ಲಿ ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಇಲ್ಲಿ ಉತ್ತಮ ಪ್ರದರ್ಶ ನೀಡಿತ್ತು. ಅಖ್ತರುಲ್ ಇಮಾನ್ (ಅಮೂರ್ ಕ್ಷೇತ್ರ), ಮುಹಮ್ಮದ್ ಇಝರ್ ಅಸ್ಫಿ (ಕೊಚದಮಾಮ್), ಶಹನವಾಜ್ ಆಲಂ (ಜೋಕಿಹತ್), ಸೈಯದ್ ರುಕ್ನುದ್ದೀನ್ (ಬೈಸಿ) ಮತ್ತು ಅಜರ್ ನಯೀಮಿ (ಬಹದ್ದೂರ್‌ಗುಂಜ್) ಈ ಐವರು ಶಾಸಕರು ಗೆದ್ದಿದ್ದರು, ಅಖ್ತರುಲ್ ಅವರನ್ನು ಹೊರತುಪಡಿಸಿ ಉಳಿದ ನಾಲ್ವರು ಈಗ ಆರ್‌ಜೆಡಿ ಸೇರಿದ್ದಾರೆ.
80 ಶಾಸಕರನ್ನು ಹೊಂದಿರುವ ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿದೆ ಆರ್‌ಜೆಡಿ. ಶೇಕಡಾ 1.24 (5,23,279) ಮತಗಳನ್ನು ಪಡೆದಿರುವ ಓವೈಸಿ ಅವರ ಪಕ್ಷವು ಗ್ರ್ಯಾಂಡ್ ಡೆಮಾಕ್ರಟಿಕ್ ಸೆಕ್ಯುಲರ್ ಫ್ರಂಟ್‌ನ ಒಂದು ಘಟಕವಾಗಿತ್ತು. ಇದು ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಉಪೇಂದ್ರ ಕುಶ್ವಾಹ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿತ್ತು.